ಸರ್ಕಾರಿ ಸಂಸ್ಥೆಗಳನ್ನು ದೊಡ್ಡದೊಡ್ಡ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಕಾರ್ಖಾನೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಜತೆಗೆ ಕುಡಿಯುವ ನೀರನ್ನೂ ಕೂಡ ಸರ್ಕಾರಗಳು ಖಾಸಗೀಕರಣ ಮಾಡುತ್ತಿವೆ. ಖಾಸಗಿಯವರಿಗೆ ಭಾರೀ ಶುಲ್ಕದ ಮೂಲಕ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ. ಜನರು ಪ್ರತಿರೋಧ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂದು ಈ ದಿನ.ಕಾಮ್ ಮಾಧ್ಯಮದ ಗೌರವ ಸಂಪಾದಕ ಡಿ ಉಮಾಪತಿಯವರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ಭೇದವಿಲ್ಲದೇ ಸಕಲ ಪಕ್ಷಗಳು ಖಾಸಗೀಕರಣಕ್ಕೆ ಕುಮ್ಮಕ್ಕು ನೀಡುತ್ತಿವೆ. ಕುಡಿಯುವ ನೀರು, ಆರೋಗ್ಯ ಎಲ್ಲವನ್ನೂ ಖಾಸಗಿಯವರ ಸುಪರ್ದಿಗೆ ನೀಡುತ್ತಿದೆ. ಈ ಖಾಸಗಿಯವರು ಶುಲ್ಕಗಳನ್ನು ಮನಸ್ಸಿಗೆ ಬಂದಂತೆ ಪಡೆದುಕೊಂಡು ಜನಸಾಮಾನ್ಯರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.

“ಈ ದೇಶದ ಕಾಡು, ನದಿ, ಗುಡ್ಡ ಕೊಳ್ಳೆಹೊಡೆದು ಪ್ರಾಕೃತಿಕ ಸಂಪತ್ತುಗಳನ್ನು ಖಾಸಿಗಿಯವರಿಗೆ ಒಪ್ಪಿಸುತ್ತಿದ್ದಾರೆ. ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರವನ್ನು ಪ್ರತಿಯೊಬ್ಬರೂ ಪ್ರತಿಭಟಸಬೇಕು” ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, “ಜಿಲ್ಲೆಯ ಶಾಸಕರು ನಿದ್ದ ಮಾಡುವುದನ್ನು ಬಿಡಬೇಕು. ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಲು ಹೋಗಿದ್ದೆವು. ಆದರೆ ಸಿಎಂ ಅವರು ಹೋರಾಟಗಾರರ ಅಹವಾಲನ್ನೂ ಕೂಡ ಆಲಿಸದೆ ಅವಮಾನ ಮಾಡಿದ್ದಾರೆ. ನಮಗೆ ಅವಮಾನ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ರಾ? ನಿಮಗೆ ಮನಸ್ಸಿಲ್ಲದಿದ್ದರೆ ಯಾಕೆ ಕರೆದುಕೊಂಡು ಹೋಗಿದ್ದಿರಿ? ಬೆಂಗಳೂರಿನಲ್ಲಿ ಮಾಡಿದ ಅವಮಾನಕ್ಕೆ ವಿಜಯಪುರ ಜಿಲ್ಲೆಯ ಜನತೆಗೆ ಕ್ಷಮೆಯಾಚಿಸಬೇಕು” ಎಂದು ಅಸಮಾಧಾನ ಹೊರಹಾಕಿದರು.
ಹಿರಿಯ ಹೋರಾಟಗಾರ ಜಿ.ಬಿ. ಪಾಟೀಲ ಮಾತನಾಡಿ, “ನಿಮ್ಮ ಕುತಂತ್ರದಿಂದ ಹೋರಾಟ ಶಾಂತವಾಗುತ್ತದೆಂದು ತಿಳಿದಿದ್ದರೆ, ಅದು ನಿಮ್ಮ ಭ್ರಮೆ. ಸರ್ಕಾರಿ ಸ್ವತ್ತುಗಳ ಉಳಿವಿಗಾಗಿ ನಡೆದ ಹೋರಾಟಗಳು ಮೈಸೂರು ಕೊಡಗಿನಲ್ಲಿ ಮಾತ್ರ. ಈಗ ವಿಜಯಪುರದಲ್ಲಿ ನಡೆಯುತ್ತಿರುವ ಹೋರಾಟ ಚರಿತ್ರೆಯ ಪುಟಗಳಲ್ಲಿ ಸೇರ್ಪಡೆಯಾಗಲಿದೆ. ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಖಾಸಗಿಯವರ ಕೈಗೆ ಮೆಡಿಕಲ್ ಕಾಲೇಜ್ ಅಷ್ಟೇ ಅಲ್ಲ, ಯಾವುದೇ ವ್ಯವಸ್ಥೆಯೂ ಕೂಡ ಖಾಸಗಿಯವರ ಸುಪರ್ದಿಗೆ ಹೋಗಬಾರದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮತ ಕಳವು | ಚು. ಆಯೋಗದ ಪರ ಪತ್ರ ಬರೆದವರು ಆಳಂದಕ್ಕೆ ಬರಲಿ: ಶಾಸಕ ಬಿ.ಆರ್ ಪಾಟೀಲ್
ಪ್ರತಿಭಟನಾ ಸಮಾವೇಶಕ್ಕೂ ಮುನ್ನ ಶಿವಾಜಿ ಮಹಾರಾಜರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಾಂಧಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಮಡಿಕಲ್ ಕಾಲೇಜು ನಿರ್ಮಾಣಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುಯಲಿಂಗಪ್ಪ ಅಂಗಡಿ, ಮುಖಂಡರಾದ ಬಿ. ಭಗವಾನರೆಡ್ಡಿ, ಎ ಸಿ ನಾಗಠಾಣ, ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ಅಣ್ಣಾರಾಯ ಇಳಗೆರಾ, ಚಂದ್ರಶೇಖರ ಲೆಂಡಿ, ಸುರೇಶ ಬೇಬಿ, ಎಚ್ ಟಿ ಭರತಕುಮಾರ, ಅಕ್ರಂ ಮಾಶ್ಯಾಳಕರ ಇದ್ದರು.





