ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೊ ಕಾಯ್ದೆ, ಪ್ರಸವ ಪೂರ್ವ ಲಿಂಗಪತ್ತೆ ನಿಷೇಧ ಕಾನೂನು ಸೇರಿದಂತೆ ವಿವಿಧ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು, ಜನರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಲು ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಗೊಮ್ಮೆ ಕಾವಲು ಸಮಿತಿ ಸಭೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವಿವಿಧ ಅನಿಷ್ಠ ಪದ್ಧತಿಗಳ ನಿರ್ಮೂಲನೆಗಳಾಗಿ ಜಾರಿಗೊಳಿಸಿರುವ ಕಾನೂನಿನ ಕುರಿತು ಸಾರ್ವಜನಿಕರಲ್ಲಿ ಹರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸುವುದು ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವಿಕೆಯಿಂದ ಕಾನೂನು ಅರಿವು ಹೊಂದಿ ಪ್ರಕರಣ ಇಳಿಮುಖವಾಗಲು ಸಾಧ್ಯವಾಗುತ್ತದೆ ಹಾಗೂ ಕಾವಲು ಸಮಿತಿ ಉದ್ದೇಶ ಸಾಫಲ್ಯತೆ ಕಾಣಲು ಸಾಧ್ಯವಾಗುತ್ತದೆ” ಎಂದರು.
“ಪ್ರತಿ ತಿಂಗಳಿಗೊಮ್ಮೆ ಸಂಬಂಧಿಸಿದ ಸ್ಥಳೀಯ ಮಟ್ಟದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಪೊಲೀಸ್ ಇಲಾಖೆ ಬೀಟ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಸಭೆ ನಡೆಸಿ ಕಾನೂನಿನನ್ವಯ ನಿಷೇಧ ಕೊಳಗಾಗಿರುವ ಕಾಯಿಗಳ ಕುರಿತು ಹರಿವು ಮೂಡಿಸುವುದಲ್ಲದೆ, ಸಭೆ ಜರಗಿಸಿರುವ ಕುರಿತು ಮಾಹಿತಿ ಒದಗಿಸಬೇಕು” ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದೆಯೂ ಹಲವು ಬಾರಿ ಸಭೆ ನಡೆಸಲು ಸೂಚಿಸಲಾಗಿತ್ತಾದರೊ ಸಭೆ ನಡೆಸದೇ ಇರುವುದರಿಂದ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, “ಸರ್ಕಾರಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯ ಲಾಭ ಮಕ್ಕಳಿಗೆ ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸದಿದ್ದಲ್ಲಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಜರಗಿಸಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಕ್ರೂಢೀಕರಿಸಬೇಕು” ಎಂದು ಸೂಚಿಸಿದರು.
ಬಾಣಂತಿ ಮತ್ತು ಗರ್ಭಿಣಿಯರಿಗಾಗಿ ಇರುವ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, ಈ ಯೋಜನೆ ಅಡಿ ಮೊದಲನೇ ಹೆರಿಗೆಗೆ 5 ಸಾವಿರ ರೂಪಾಯಿ ನೇರ ನಗದು, ವರ್ಗಾವಣೆ ಮೂಲಕ ಎರಡು ಕಂತುಗಳಲ್ಲಿ ಪಾವತಿಸಲಾಗುತ್ತದೆ ಹಾಗೂ ಎರಡನೇ ಹೆಣ್ಣು ಮಗು ಫಲಾನುಭವಿಗೆ ಒಂದೇ ಕಂತಿನಲ್ಲಿ ಆರು ಸಾವಿರಗಳನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ. ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸೌಲಭ್ಯ ಒದಗಿಸಲು ಶ್ರಮಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ತಪಾಸಣೆ ನೆಪದಲ್ಲಿ ಪೊಲೀಸರ ಕಿರುಕುಳ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವಾ ಪ್ರಾದಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಡಿವೈಎಸ್‌ಪಿ ಬಸವರಾಜ ಎಲೆಗಾರ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ ಕೆ ಚೌಹಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ದೀಪ ಕಾಳೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೀಪಾಕ್ಷಿ ಜಾನಕಿ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ಪೂಜಾರಿ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಸೇರಿದಂತೆ ಜಿಲ್ಲೆಯ ವಿವಿಧ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದ ಅಧಿಕಾರಿಗಳು ಇದ್ದರು.





