‘ಬಹುಜನರ ನಡೆ ಪಾರ್ಲಿಮೆಂಟ್ ಕಡೆಗೆ’ ವಿಭಾಗ ಮಟ್ಟದ ಸಮಾವೇಶ ಮಾರ್ಚ್ 11ರ ಬೆಳಿಗ್ಗೆ 11ಕ್ಕೆ ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಕಲ್ಲಪ್ಪ ತರವಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, “ವಿಜಯಪುರ ಆಕಾಶವಾಣಿ ಕೇಂದ್ರದ ಹತ್ತಿರವಿರುವ ವಿಜಯ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದ್ದು, ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ಬಿಎಸ್‌ಪಿ ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಮ್ ಜಿ ಗೌತಮ್, ಬಿಎಸ್‌ಪಿ ರಾಜ್ಯ ಘಕಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಸಮಾವೇಶ ಉದ್ಘಾಟಿಲಿದ್ದಾರೆ. ಬಿಎಸ್‌ಪಿ ರಾಜ್ಯ ಸಂಯೋಜಕ ನಿತಿನ್ ಸಿಂಗ್, ಎಂ ಗೋಪಿನಾಥ್, ಎಂ ಕೃಷ್ಣಮೂರ್ತಿ ಉಪಸ್ಥಿತರಿರುತ್ತಾರೆ” ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾ ಉಸ್ತುವಾರಿ ಕಾಶಿನಾಥ್ ದೊಡ್ಮನಿ ಮಾತನಾಡಿ, “ಸಂವಿಧಾನ ಜಾರಿಗೆ ಬಂದು ಹಲವು ದಶಕಗಳೇ ಕಳೆದರೂ ಈವರೆಗೆ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡುತ್ತವೆ. ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತು ಬಿಡುತ್ತವೆ. ಯಾವ ಸರ್ಕಾರವೂ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿಲ್ಲ” ಎಂದು ಆರೋಪಿಸಿದರು.
“ಬಹುಜನ ಸಮಾಜ ಪಕ್ಷ ಸಂವಿಧಾನದ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಈಗ ಜಾಗೃತರಾಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಜಿದ್ದಾಜಿದ್ದಿ ಜೋರು
“ಮುಂಬರುವ ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ ರಾಜ್ಯದ 28 ಕ್ಷೇತ್ರಗಳಿಗೆ ಕಣಕ್ಕೆ ಇಳಿಸಲಾಗುವದು, ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಆದರೆ ಇನ್ನು ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಇನ್ನು ನಿರ್ಧಾರವಾಗಿಲ್ಲ” ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ್ ಬೊಮ್ಮನಜೋಗಿ, ಸಂಘಟನಾ ಕಾರ್ಯದರ್ಶಿ ನಿತಿಸ್ ತೊರವಿ, ಖಜಾಂಚಿ ಸುರೇಶ್ ಚೂರಿ, ಜಿ ಬಿ ಡವಳಗಿ ಇದ್ದರು.




