ಕೊಲೆ ಆರೋಪಿಗಳ ಬಂಧನಕ್ಕೆ ಹೋಗಿದ್ದ ವೇಳೆ ತಮ್ಮ ಮೇಲೆ ಬೈಕ್ ಹತ್ತಿಸಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕಣ್ಣೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗುಂಡೇಟು ತಿಂದ ಆರೋಪಿ ಅಕ್ಷಯ್ ಎಂಬಾತನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯಪುರ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಾಗರ ಬೆಳ್ಳಂಡಗಿ ಹಾಗೂ ಇಸಾಕ ಖುರೇಶಿ ಎಂಬುವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಈ ಎರಡೂ ಕೊಲೆಗಳ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿಗಳ ಹಲ್ಲೆಗೆ ಯತ್ನಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಅಕ್ಷಯ ಜುಲಾಜುಲೆ ಕಾಲಿಗೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ ರಾಯಗೊಂಡ ಜಾನಾರ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಎರಡೂ ಕೊಲೆಗಳನ್ನು ಮಾಡಿದ್ದು ಐವರು ಆರೋಪಿಗಳಾದ ಅಕ್ಷಯ, ಭರತ, ಸಂಜಯ, ಸಂತೋಷ, ಮಲ್ಲನಗೌಡರನ್ನು ಬಂಧಿಸಲಾಗಿದೆ.
ಎರಡು ಹತ್ಯೆಗಳ ಹಿನ್ನೆಲೆ: 2023ರಲ್ಲಿ ಗ್ರಾಮದ ಈರಣ್ಣಗೌಡ ಪಾಟೀಲ ಎಂಬಾತನ ಮೇಲೆ ಈಗ ಕೊಲೆಯಾಗಿರುವ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ ಖುರೇಶ ಹಲ್ಲೆ ಮಾಡಿದ್ದರು. ಈ ವೇಳೆ ಈರಣ್ಣಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎಂಟು ತಿಂಗಳ ಬಳಿಕ ಈರಣ್ಣಗೌಡ ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಈರಣ್ಣಗೌಡನ ಸಹೋದರ ಮಲ್ಲನಗೌಡ ಹಾಗೂ ಆತನ ಮಕ್ಕಳು ಸೇರಿ ಸಾಗರ ಹಾಗೂ ಇಸಾಕ ಎಂಬುವವರನ್ನು ಭಾನುವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಮನವಿ
ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಬೈಕ್ ಹಾಯಿಸಿ ಹಲ್ಲೆ ಮಾಡಿ ಪರಾರಿಯಾಗಲು ಆರೋಪಿ ಅಕ್ಷಯ ಜುಲಾಜುಲೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡುಹಾರಿಸಿದ್ದರಿಂದ ಆರೋಪಿ ಅಕ್ಷಯ ಜುಲಾಜುಲೆಯ ಬಲಗಾಲಿನ ಮೊಳಕಾಲಿಗೆ ಗುಂಡು ತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆರೋಪಿಯನ್ನು ದಾಖಲಾಗಿಸಲಾಗಿದೆ. ಇತರೆ ನಾಲ್ವರು ಆರೋಪಿಗಳಾದ ಭರತ, ಸಂಜಯ, ಸಂತೋಷ, ಮಲ್ಲನಗೌಡ ಬಂಧನವಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ಹಂಚಿಕೊಂಡಿದ್ದಾರೆ.





