ಮಕ್ಕಳ ಪ್ರತಿಭೆಯನ್ನು ಹೊರತರಲು ಚಿಣ್ಣರ ಮೇಳ ಒಳ್ಳೆಯ ವೇದಿಕೆಯಾಗಿದೆ. ಯಾವುದೇ ಭೇದ ಭಾವವಿಲ್ಲದೆ ನಾವೆಲ್ಲರೂ ಪರಸ್ಪರ ಸ್ನೇಹಿತರಂತೆ ಸೇರಿ ಪ್ರೀತಿ, ಬಾಂಧವ್ಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದ ಸಂಯೋಜಕ ಶ್ರೀಧರ ಕೊಣ್ಣೂರ ತಿಳಿಸಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಾಲಕಿರಣ ಮಕ್ಕಳ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚಿಣ್ಣರ ಮೇಳ-2025 ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮತನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಡಾ. ಸುನಿಲ್ ಯಾದವ್ ಅವರು ಮಾತನಾಡುತ್ತ, “ನಾವೆಲ್ಲರೂ ಒಂದೇ ತೋಟದ ಹೂಗಳಂತೆ ಸಹಬಾಳ್ವೆಯಿಂದ ಜೀವನ ನಡೆಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕು. ಇವತ್ತಿನ ಮಕ್ಕಳು ಮೊಬೈಲ್‌ಗಳಿಗೆ ದಾಸರಾಗಿದ್ದಾರೆ. ಮೊಬೈಲ್ ಮಕ್ಕಳನ್ನು ತಪ್ಪು ದಾರಿಗೆ ಎಳೆಯುವ ಮೂಲಕ ಮಕ್ಕಳು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಬಲಿಯಾಗುತ್ತಿದ್ದಾರೆ” ಎಂದು ತಿಳಿಸಿದರು.

“ಜತೆಗೆ, ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರುಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಆಚಾರ ವಿಚಾರ ಸಂಸ್ಕೃತಿಗೆ ಒತ್ತು ನೀಡಿ ಭವಿಷ್ಯ ರೂಢಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾ. ಕೆವಿನ್ ಸಿಕ್ವೇರಾ ಅವರು ಮಾತನಾಡುತ್ತ, “ಮಕ್ಕಳು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾದರೆ ಮೌಲ್ಯಯುತ ಶಿಕ್ಷಣ ಅತಿ ಮುಖ್ಯವಾಗಿದೆ. ಜೀವನದಲ್ಲಿ ದೊಡ್ಡ ಕನಸುಗಳು ಇದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು” ಎಂದರು.

ನಂತರ ಮಕ್ಕಳಿಗೆ ವಿವಿಧ ಬಗೆಯ ಆಟೋಟಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸ್ಲಂಗಳಿಂದ 700 ಮಕ್ಕಳು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಶಿಕ್ಷಣಕ್ಕೆ ಹೊಸ ಆಯಾಮ: ವಿದ್ಯಾರ್ಥಿಗಳ ನೈಜ ಜೀವನ ಕಲಿಕೆ
ಮುಖ್ಯ ಅತಿಥಿಗಳಾಗಿ ಲೊಯೋಲ ಪದವಿ ಪೂರ್ವ ಕಾಲೇಜು ನಿರ್ದೇಶಕ ಫಾ. ರೊನಾಲ್ಡ್ ಸೆರಾವೊ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಹ ನಿರ್ದೇಶಕ ಫಾ. ಸುಮನ ಬಾಲು, ಕಾರ್ಯ ಸಂಯೋಜಕಿ ಸಿಸ್ಟರ್ ಜಯಾ ಮೇರಿ ಇದ್ದರು. ಕಾರ್ಯಕ್ರಮದ ಉದ್ಘಾಟನೆ ನಂತರ ಮಕ್ಕಳಿಂದ ಸಂವಿಧಾನ ಪೀಠಿಕೆ ಪಠಿಸಲಾಯಿತು.





