“ಗ್ಯಾರೆಂಟಿ ಹೆಸರಿನಲ್ಲಿ ನೀರಾವರಿ ಯೋಜನೆಗಳನ್ನೇ ಕಾಂಗ್ರೆಸ್ ಸರ್ಕಾರ ಸ್ಥಗಿತ ಗೊಳಿಸಿಬಿಟ್ಟಿದೆ ಎಂದು ಜೆಡಿಎಸ್ ನ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ವಿಜಯಪುರ ನಗರದ ಸಿಂದಗಿ ಬೈಪಾಸ್ ರಸ್ತೆಯ ಬಳಿ ವಿಶಾಲ ಜಾಗದಲ್ಲಿ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು “ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರೆ ನಾಡಿನ ಆಧುನಿಕ ಭಗೀರಥ. ಅಂದು ಜಲ ಸಂಪನ್ಮೂಲ ಸಚಿವರಾಗಿ ಗುತ್ತಿಗೆದಾರರ ಸಮಸ್ಯೆಯನ್ನು ಅತ್ಯಂತ ಚಾಣಕ್ಷತನದಿಂದ ನಿವಾರಣೆ ಮಾಡಿ ಯೋಜನೆಗಳು ಸರಾಗವಾಗಿ ಸಾಗುವಂತೆ ಮಾಡಿದರು. ಆಲಮಟ್ಟಿ ಅಣೆಕಟ್ಟಿಗೆ ಜೀವ ತುಂಬಿದರು. ಪರಿಣಾಮವಾಗಿ ಲಕ್ಷಾಂತರ ಜಮೀನುಗಳಿಗೆ ನೀರಾವರಿ ಸಾಧ್ಯವಾಗಿ ಹಸಿರು ಕ್ರಾಂತಿ ಸೂಚನೆಯಾಗಿದೆ ಎಂದು ವಿವರಿಸಿದರು. ವರ್ಲ್ಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನೆನೆಯ ಗುರಿಗೆ ಬಿದ್ದ ನೀರಾವರಿ ಯೋಜನೆಗಳಿಗಾಗಿ ದೊಡ್ಡಮಟ್ಟದ ಸಾಲವನ್ನು ಪಡೆಯಲು ಯಶಸ್ವಿಯಾಗಿದ್ದರು” ಎಂದರು.
ದೇವರಹಿಪ್ಪರಗಿ ವಿಧಾನ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ್ (ಕಾಗೆ) ಮಾತನಾಡಿ, “ಬಿಹಾರ್ ಚುನಾವಣೆಯಲ್ಲಿ ಎನ್ ಡಿ ಎ- ಜೆಡಿಎಸ್ ಮೈತ್ರಿಕೂಟದ ಸರ್ಕಾರ ಭರ್ಜರಿ ಬಹುಮತದೊಂದಿಗೆ ಗೆಲವು ಸಾಧಿಸಿದಂತೆ ಕರ್ನಾಟಕದಲ್ಲಿಯೂ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದರು.
“ಅಲ್ಲಿ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾದಂತೆ ಕರ್ನಾಟಕದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ಭವಿಷ್ಯ ನುಡಿದರು.
“ಮಾಜಿ ಪ್ರಧಾನಿ ದೇವೇಗೌಡರು ಲಿಂಗಾಯತ ವಿರೋಧಿ ಎಂಬ ಹಣೆಪಟ್ಟೆಯನ್ನು ಕಾಂಗ್ರೆಸ್ನವರು ಕಟ್ಟುವ ಪ್ರಯತ್ನ ಮಾಡಿದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ದೇವೇಗೌಡರು ಒಕ್ಕಲಿಗ ವಿರೋಧಿ ಎಂದು ಹೇಳುತ್ತಿದ್ದಾರೆ. ನಮ್ಮ ಹೆಮ್ಮೆಯ ದೇವೇಗೌಡರು ಯಾವ ಯಾವ ನಾಯಕರನ್ನು ಬೆಳೆಸಿದ್ದಾರೋ ಅವರೇ ಈಗ ಅವರ ವಿರೋಧಿಯಾಗಿದ್ದಾರೆ, ಅವರು ಯಾರನ್ನು ಬೆಳೆಸಿದ್ದಾರೋ ಅವರೇ ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಶರಣಗೌಡ ಕಂದಕೂರ,ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ,ಆಲ್ಕೋಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ,ಮಾಜಿ ಶಾಸಕ ಜಿ ಬಿ ಪಾಟೀಲ ಹಲಸಂಗಿ,ಮುಖಂಡರಾದ ನಾಡಗೌಡ ಬಿರಾದಾರ,ಬಿಡಿ ಪಾಟೀಲ ಹಂಜಗಿ,ಅಪ್ಪುಗೌಡ ಪಾಟೀಲ ಮನಗೂಳಿ,ಬಸವರಾಜ ಹೊನವಾಡ,ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮೊದಲಾದವರು ಇದ್ದರು.





