ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪಂಜಿನ ಮರವಣಿಗೆಯನ್ನು ನಡೆಸಲಾಯಿತು.
ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್‌ನಿಂದ ಗಾಂಧಿ ವೃತ್ತದ ಮಾರ್ಗವಾಗಿ ತೆರಳಿದ ದಸಂಸ ಮುಖಂಡರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್, “ಡಾ. ಬಿ ಆರ್ ಅಂಬೇಡ್ಕರ್ ಅವರ ಬಯಕೆಯಂತೆ ದುರ್ಬಲರನ್ನು ರಕ್ಷಿಸಲು ಅವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಗೆ ಮತ್ತು ಇತರ ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಿ ಎಂದು ನಮ್ಮ ಸಂವಿಧಾನದ ಆಶಯದಂತೆ ಆಡಳಿತ ನಡೆಸುವ ಸರ್ಕಾರಗಳಿಗೆ ಕಿವಿ ಮಾತು ಹೇಳಿದ್ದರು. ಆದರೆ, ಸರ್ಕಾರಗಳು ಯಾವುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ” ಎಂದು ದೂರಿದರು.

“ವಿಜಯಪುರ ಜಿಲ್ಲೆಯಲ್ಲೂ ದಲಿತರ ಮೇಲಲೆ ಅನೇಕ ದೌರ್ಜನ್ಯ ಮತ್ತು ಅನ್ಯಾಯಗಳು ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಪದೇ ಪದೇ ತರಲಾಗಿದ್ದರೂ, ಯಾವುದೇ ಸೂಕ್ತ ಕ್ರಮಗಳಾಗಿಲ್ಲ” ಎಂದರು.
ಜಿಲ್ಲಾ ಸಂಚಾಲಕ ಅಶೋಕ್ ಛಲವಾದಿ ಮಾತನಾಡಿ, ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ರಿ.ಸ.ನಂ.56 ಮತ್ತು 75,77ರಲ್ಲಿ ಹೆಚ್ಚುವರಿ ಜಮೀನನ್ನು 19 ದಲಿತ ಕುಟುಂಗಳಿಗೆ 74 ಏಕರೆ 17 ಗುಂಟೆ ಜಮೀನನ್ನು ಭೂನ್ಯಾಯ ಮಂಡಳಿ 1981ರಲ್ಲಿ ನೀಡಿತ್ತು. ಕಳೆದ 43 ವರ್ಷಗಳಿಂದ ಪರಿಶಿಷ್ಟ ಜಾತಿಯ ಜನರು ಈ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಆ 19 ಕುಟುಂಬಗಳಿಗೆ ಪರ್ಯಾಯ ಭೂಮಿ ವ್ಯವಸ್ಥೆ ಬಗ್ಗೆ ಮತ್ತು ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಲು ಸರ್ಕಾರ ತೀವ್ರಗತಿಯಲ್ಲಿ ನ್ಯಾಯ ಒದಗಿಸುವಲ್ಲಿ ಮುರ್ತುವರ್ಜಿ ವಹಿಸಬೇಕು” ಎಂದರು.
ಸಂಚಾಲಕರಾದ ಪ್ರಕಾಶ್ ಗುಡಿಮನಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಬಳಸುತ್ತಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಎಸ್‌ಸಿಪಿ-ಟಿಎಸ್‌ಪಿ ಹಣದಲ್ಲಿ 2023-24 ಸಾಲಿನಲ್ಲಿ 11,000 ಕೋಟಿ, 2024-25ನೇ ಸಾಲಿನಲ್ಲಿ 14,000 ಕೋಟಿ ಬಳಸಿದೆ. ಗ್ಯಾರಂಟಿ ಯೋಜನೆಗಳನ್ನು ನಾವೇ ಮಾಡಿದ್ದು ಎಂದು ಹೇಳಿಕೊಳುತ್ತಿರುವ ಸರ್ಕಾರ ಪರಿಶಿಷ್ಟರಿಗೆ ದ್ರೋಹ ಬಗೆಯುತ್ತಿದೆ. ದಲಿತರ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಗ್ಯಾರಂಟಿ ಯೋಜನೆಗಳಿಗೆ ಬಳಸದೇ, ಈ ಹಣವನ್ನು ಎಸ್.ಸಿ / ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಅರ್ಧ ಶತಮಾನದ ಉರ್ದು ಶಾಲೆಗೆ ಬೇಕಿದೆ ಮೂಲ ಸೌಕರ್ಯ
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ರೇಣುಕಾ ಮಾದರ, ಪರುಶುರಾಮ ಡಿಂಡಿವಾರ ಶರಣು ಶಿಂಧೆ, ಲಕ್ಕಪ್ಪ ಬಡಿಗೇರ್, ಸುರೇಶ ನಡಗಡ್ಡೆ, ಅನಿಲ ಕೊಡತಿ, ಬಿ. ಎಸ್. ತಳವಾರ, ರವಿ ಮ್ಯಾಗೇರಿ, ಶಿವಾನಂದ ಮೂರುಮಾನ, ಮಂಜುನಾಥ ಎಂಟಮಾನ, ರಾಜಕುಮಾರ್ ಸಿಂಧನೂರ, ರವಿಚಂದ್ರ ಛಲವಾದಿ, ಲಕ್ಷ್ಮಣ್ ಹಾಲಿಹಾಳ, ಚಂದ್ರಶೇಖರ ಕೆಳಗಿನಮನಿ, ಸಂತೋಷ ಠಕ್ಕೆ, ಸಿದ್ದು ಬಾರಿಗಿಡದ, ಶುಭದ್ರ ಮೇಲಿನಮನಿ, ಚಂದ್ರಕಲಾ ಮಸಳಿಕೇರಿ, ಮುತ್ತು ಬಿದರಿ ಇತರರು ಉಪಸ್ಥಿತರಿದ್ದರು.





