ದೇಶದಲ್ಲಿ ಕೊಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣ್ಯವಾದಿ ಅಧಿಕಾರವನ್ನು ನಿರಂತರವಾಗಿ ಹೇರುತ್ತಿರುವ ಆರ್‌ಎಸ್‌ಎಸ್ ಕುಂತತ್ರವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಮಿತಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದೆ.
ದಸಂಸ ಬೆಳಗಾವಿ ವಿಭಾಗೀಯ ಸಂಚಾಲಕ ಸಂಜಯ ಕಂಬಾಗಿ ಮಾತನಾಡಿ, “1950ರ ದಶಕದಲ್ಲಿಯೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಯಾವುದೇ ಕಾರಣಕ್ಕೂ ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಮಹಾಸಭಾದಂತಹ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ರಾಜಕೀಯ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಆರ್ಎಸ್ಎಸ್ ಅಪಾಯಕಾರಿ ಸಂಘಟನೆ ಎಂದು ಘೋಷಿಸಿದ್ದರು. ಭಾರತ ಸ್ವತಂತ್ರಗೊಂಡು, ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಜಾರಿಗೊಂಡಾಗ ಇದೆ ಆರ್‌ಎಸ್‌ಎಸ್ ಪತ್ರಿಕೆಯಾದ ಆರ್ಗನೈಜರ್‌ನಲ್ಲಿ ʼಭಾರತ ಸಂವಿಧಾನದಲ್ಲಿ ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಪ್ರಾಚೀನವಾದುದ್ದು. ಜಗತ್ತಿನ ಜನರೆಲ್ಲ ಅದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಆದರೆ ಸಂವಿಧಾನ ಪಂಡಿತರಿಗೆ ಅದು ಅರ್ಥವಾಗುತ್ತಿಲ್ಲʼ ಎಂದು ಟೀಕಿಸಿತ್ತು. ಆ ಮೂಲಕ ಮನುವಾದಿಗಳು ಮನುಸ್ಮೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿಂದಲೂ ತಿರಸ್ಕಾರದ ಮನೋಭಾವದಿಂದಲೆ ನೋಡುತ್ತಾ ಬಂದಿರುತ್ತಾರೆ” ಎಂದು ಆರೋಪಿಸಿದರು.
ದಸಂಸ ಮಹಿಳಾ ಸಂಚಾಲಕಿ ಪ್ರತಿಭಾ ಹೊಸಮನಿ ಮಾತನಾಡಿ, “ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಲು ಹಿಂದೂ ಕೋಡ್ ಬಿಲ್ ಜಾರಿಯಾಗಲು ಅಂಬೇಡ್ಕರ್ ಹೋರಾಡುತ್ತಿದ್ದರು. ಆದರೆ ಅದರ ಪ್ರತಿಯನ್ನು ಸುಟ್ಟು ಹಾಕಿ ಆರ್‌ಎಸ್‌ಎಸ್ ವಿಕೃತಿ ಮೆರೆದಿತ್ತು. ಇತ್ತೀಚಿಗೆ ಭಾರತದ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ಗವಾಯಿ ರವರ ಮೇಲೆ ಶೂ ಎಸೆಯಲಾಗಿತ್ತು. ಆ ಕುಕೃತ್ಯ ಮಾಡಿದ ವಕೀಲ ರಾಕೇಶ ಕಿಶೋರ ಸನಾತನ ಧರ್ಮ ಉಳಿಸಲು ಶೂ ಎಸೆದೆ ಎಂದು ಎದೆ ಉಬ್ಬಿಸಿ ಹೇಳುತ್ತಾನೆ. ಭಾರತ ದೇಶದಲ್ಲಿ ಆತ ವಕೀಲನಾಗಿದ್ದು ಮನುಸ್ಮೃತಿಯಿಂದಲೊ? ಅಥವಾ ಸಂವಿಧಾನದಿಂದಲೊ? ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕಿತ್ತು. ಭಾರತ ಸಂವಿಧಾನವನ್ನು ಕಾಪಾಡುವ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದರೆ ಭಾರತ ಸಂವಿಧಾನವನ್ನು ಅವಮಾನಿದಂತೆ ಅಲ್ಲವೆ? ಈ ಪಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸುತ್ತಿರುವ ಎಲ್ಲರೂ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಬೆಂಬಲಿಗರೆ ಆಗಿದ್ದಾರೆ. ಅವರಿಗೆ ಮನಸ್ಪತಿ ಜಾರಿಯಾರಿಯಾಗಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಅಸಂಘಟಿತ ಕಾರ್ಮಿಕರಿಗೆ ₹36,000ಗಳ ಕನಿಷ್ಠ ವೇತನಕ್ಕೆ CITU ಆಗ್ರಹ
“ಭಾರತ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ರವರ ಆಟ ಅತಿರೇಕವಾಗಿದೆ. ಇಂತಹ ದೇಶ ದ್ರೋಹಿಗಳನ್ನು ಬಯಲುಗೊಳಿಸಿ ತಕ್ಕ ಪಾಠ ಕಲಿಸದೇ ಇದ್ದರೆ ಭಾಗ್ಯವಿಧಾತ ಭಾರತವನ್ನು ಬಲಿ ಭಾರತವಾಗಿಸುತ್ತಾರೆ. ಇದಾಗಲು ನಾವು ಬಿಡಬಾರದು. ಆರ್‌ಎಸ್ಎಸ್ 100 ವರ್ಷ ಪೂರೈಸಿದೆ ಎಂದು ಕಾನೂನು ಬಾಹಿರವಾಗಿ ತನಗೆ ಬೇಕಾದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಮುಂಗಡವಾಗಿ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಅನುಮತಿ ಇಲ್ಲದೆ ಸರಕಾರಿ ಇತರೆ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದೆಂದು ಸರಕಾರಕ್ಕೆ ಪತ್ರ ಬರೆದರು. ಇದನ್ನು ಸಹಿಸಲಾಗದ ಒಬ್ಬ ಮನುವಾದಿ ಆರ್ಎಸ್‌ಎಸ್ ಕಾರ್ಯಾಕರ್ತ ಪ್ರಿಯಾಂಕ್ ಖರ್ಗೆಯವರಿಗೆ ಅಶ್ಲೀಲ ಶಬ್ದ ಬಳಿಸಿದ್ದಲ್ಲದೆ ಅವರ ಫೋನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ. ಇಂತಹ ಕೀಳು ಮಟ್ಟದ ಮನಸ್ಥಿತಿ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಮತ್ತು ಇಂತಹ ಮನುವಾದಿಗಳ ವಿರುದ್ಧ ಎದೆಗೊಟ್ಟು ಮುನ್ನಡೆಯಬೇಕು. ಮುಷ್ಠಿ ಬಿಗಿಹಿಡಿದು ಧಿಕ್ಕಾರ ಹೇಳಬೇಕು. ಪ್ರಭುತ್ವ ಭಾರತದೆಡೆಗೆ ಇನ್ನೊಂದಿಷ್ಟು ಗಟ್ಟಿಯಾದ ಹೆಜ್ಜೆ ಇಡಬೇಕು. ಚಾತುರ್ವರ್ಣ ಭಾರತವನ್ನು ಕಟ್ಟಲು ಹೊರಟ ಸಂಘ ಪರಿವಾರದ ಹಗಲುಗನಸನ್ನು ಹುಸಿಯಾಗಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪಣತೊಡಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರು ಭಾಗವಹಿಸಿದ್ದರು.





