ವಿಕಲಚೇತನರ ಏಳಿಗೆಗಾಗಿ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು, ಯೋಜನೆಯ ಲಾಭ ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಅರ್ಹರು ಇಂತಹ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಹೇಳಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಕುಂದುಕೊರತ ಸಭೆಯಲ್ಲಿ ಮಾತನಾಡಿದ ಅವರು, “ವಿಕಲಚೇತನರ ಕುಂದು ಕೊರತೆ ಸಭೆ ಕುರಿತು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಸರ್ಕಾರಿ ಕಚೇರಿ, ಆಸ್ಪತ್ರೆ, ಬ್ಯಾಂಕ್ ಎಟಿಎಂಗಳಲ್ಲಿ ಹ್ಯಾಂಪ್ ಮತ್ತು ರ್ಯಾಲಿ ಅಳವಡಿಸಬೇಕು. ಜಿಲ್ಲೆಯಲ್ಲಿ ಬೆನ್ನು ಉರಿ ಅಪಘಾತಕ್ಕೆ ಒಳಗಾದ ವಿಕಲಚೇತನರಿಗೆ ಮೆಡಿಕಲ್ ಕಿಟ್ ವಿತರಿಸಲು ಅವಕಾಶವಿದ್ದು, ಅವಶ್ಯಕತೆ ಇರುವ ಹಾಗೂ ಯಾರು ಕೈ ಬಿಟ್ಟು ಹೋಗದಂತೆ ಕಿಟ್‌ಗಳನ್ನು ಒದಗಿಸಬೇಕು. ಈ ಮಾಹಿತಿ ನೀಡಬೇಕು” ಎಂದು ಸೂಚಿಸಿದರು.
“ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳಡಿ ಅರ್ಹ ವಿಕಲ ಚೇತನರು ಸಲ್ಲಿಸುವ ಅರ್ಜಿಗಳಿಗೆ ಮೊದಲಾದ್ಯತೆ ನೀಡಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಸ್ಥಳೀಯವಾಗಿ ಜಾಬ್ ಕಾರ್ಡ್ ಮಾಡಿ, ಉದ್ಯೋಗ ನೀಡಲು ಕ್ರಮವಹಿಸಬೇಕು. 15ನೇ ಹಣಕಾಸು ಯೋಜನೆಯಡಿ ಸಾಮೂಹಿಕ ಫಲಾನುಭವಿಗಳ ಆಯ್ಕೆಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಫಲಾನುಭವಿಗಳ ಆಯ್ಕೆಗೆ ಕುಂದು ಕೊರತೆ ಸಭೆಯಲ್ಲಿ ವಿಕಲಚೇತನರು ಮನವಿ ಮಾಡಿದ್ದು, ಇದರ ಸಾಧ್ಯತೆಗಳನ್ನು ಪರಿಶೀಲಿಸಿ ಮಾಹಿತಿ ನೀಡಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಮಹಿಳೆ ಆತ್ಮರಕ್ಷಣೆ ಕಲೆ ಕಲಿಯುವುದು ಅನಿವಾರ್ಯ: ಪ್ರೊ. ನಾಮದೇವಗೌಡ
“ಕಲ್ಯಾಣ ಕರ್ನಾಟಕ ಸಾರಿಗೆ ಬಸ್ನಲ್ಲಿ ವಿಕಲಚೇತನರಿಗೆ ನಿಗದಿಪಡಿಸಿರುವ ಆಸನಗಳನ್ನು ಅವರಿಗೇ ಬಳಕೆಯಾಗುವಂತೆ ನೋಡಿಕೊಳ್ಳಲು ನಿರ್ವಾಹಕರಿಗೆ ಸುತ್ತೋಲೆ ಹೊರಡಿಸಬೇಕು. ಪಂಚಾಯತ್ ಮಟ್ಟದಲ್ಲಿ ಜಾರಿಯಾಗುವ ವಸತಿ ಯೋಜನೆಗಳಲ್ಲಿ ವಸತಿ ರಹಿತ ಅರ್ಹ ವಿಕಲ ಚೇತನರನ್ನು ಪರಿಗಣಿಸಬೇಕು. ವಿಕಲಚೇತನರಿಗೆ ಮೀಸಲಿಟ್ಟ ಶೇ. 5ರಷ್ಟು ಅನುದಾನ ಬಳಕೆ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸಬೇಕು. ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆ ಅನುದಾನ ಕುರಿತು ಸಮಗ್ರ ಮಾಹಿತಿಯನ್ನು 15 ದಿನದಲ್ಲಿ ಸಲ್ಲಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಭದ್ರದ್ದೀನ್ ಸೌದಾಗರ, ಆಹಾರ ಇಲಾಖೆ ಉಪ ನಿರ್ದೇಶಕ ವಿನಯ ಕುಮಾರ ಪಾಟೀಲ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಾಸಿಂ ಬಾಬಾ ಮುದ್ದೇಬಿಹಾಳ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ ಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೇವಾ ಸಂಸ್ಥೆ ಮುಖ್ಯಸ್ಥರು ಉಪಸ್ಥಿತರಿದ್ದರು.





