2013ರ ಕಾಯ್ದೆ ಅನ್ವಯ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅನ್ನು ನಿಷೇಧಿಸಲಾಗಿದ್ದು, ಸ್ವಚ್ಛತಾ ಕರ್ಮಿಗಳಿಗೆ ಸರ್ಕಾರದಿಂದ ನೀಡಲಾಗಿರುವ ರಕ್ಷಣಾ ಪರಿಕರಗಳನ್ನು ವಿತರಣೆ ಮಾಡಿ, ಅವುಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಆನಂದ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮ್ಯಾನುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರನ್ವಯ ಜಿಲ್ಲಾಮಟ್ಟದ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಹಸ್ತ ಚಾಲಿತವಾಗಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಸ್ಕ್ಯಾವೆಂಜರ್‌ಗಳು ಮತ್ತು ಕುಟುಂಬಗಳಿಗೆ ಪುನರ್ವಸತಿ, ಪರ್ಯಾಯ ಉದ್ಯೋಗಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಕರ್ಮಿಗಳಿಗೆ ಸಮವಸ್ತ್ರ, ಗುರುತಿನ ಚೀಟಿ ವಿತರಿಸಬೇಕು. ಸಂಗ್ರಹಿಸಿದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಕೊಳ್ಳುವಲ್ಲಿ ಕ್ರಮ ವಹಿಸಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಅಬಕಾರಿ ಬಾಕಿ ಪಾವತಿಸದ ರೈತನ ಜಮೀನು ಹರಾಜು ಕ್ರಮಕ್ಕೆ ಗ್ರಾಮಸ್ಥರ ವಿರೋಧ
ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಫಾಯಿ ಕರ್ಮಚಾರಿ ನಾಮನಿರ್ದೇಶಕ ಡಾ. ಬಾಬು ಸಜ್ಜನ, “ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಿದ್ದರು ಸಹ ಸಾರ್ವಜನಿಕರ ಸ್ಥಳಗಳಲ್ಲಿ ಕಸ ಕಂಡುಬರುತ್ತದೆ. ಈ ಕುರಿತು ಸೂಕ್ತ ಜಾಗೃತಿ ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.





