ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂಬುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಅನೇಕ ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಸಚಿವ ಶಿವಾನಂದ ಪಾಟೀಲ ಅವರೂ ಕೂಡ ವೈದ್ಯಕೀಯ ಸಚಿವರನ್ನು ಭೇಟಿ ಮಾಡಲಿ, ಬೇಕಾದರೆ ನಾನೂ ಅವರೊಂದಿಗೆ ಬರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪ ವಿಚಾರವಾಗಿ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ಸಚಿವರಿಗೆ ಮಾತನಾಡಲು ಸಚಿವ ಸಂಪುಟ ಹಾಗೂ ಫೋರಂ ಇದೆ. ಅಲ್ಲದೇ, ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರಿದ್ದು, ಅವರೊಂದಿಗೆ ಕುಳಿತುಕೊಂಡು ಚರ್ಚೆ ಮಾಡಬೇಕು. ಇಲ್ಲಿ ಬಂದು ಹೇಳಿಕೆ ನೀಡುವಂತಹದ್ದು ಮತ್ತು ಅಸಹಕಾರ ಮಾಡಿದರು ಎಂಬುವುದಾಗಿ ನನ್ನ ಹೆಸರನ್ನೂ ಬಳಸಿಕೊಂಡಿದ್ದಾರೆ” ಎಂದು ಶಿವಾನಂದ ಪಾಟೀಲರ ಹೇಳಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
“ನನಗಂತೂ ಈಗಾಗಲೇ ವೈದ್ಯಕೀಯ ಕಾಲೇಜು, ಡೀಮ್ ವಿಶ್ವವಿದ್ಯಾಲಯ ಇದೆ. ಬೇಕಾದರೆ ಇನ್ನೂ ಹತ್ತು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ನಾವು ಮಾಡಬಹುದು. ಬೆಂಗಳೂರಿನಲ್ಲೂ ಮಾಡುವ ಅವಕಾಶ ಇದೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ. ಆದರೆ, ಅವರು ಈ ರೀತಿ ಹೆಸರು ಬಳಕೆ ಮಾಡುವುದು ಹಾಗೂ ಪದೇ ಪದೆ ಮುಜುಗರದ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೇ, ಸಹಕಾರ ನೀಡದಂತಹ ಯಾವುದೇ ಪ್ರಸಂಗ ಬಂದಿಲ್ಲ. ನಾನು ಐದು ವರ್ಷ ಸಚಿವನಾಗಿದ್ದಾಗ ಯಾರೆಲ್ಲ ಎಷ್ಟು ಸಹಕಾರ ಮಾಡಿದ್ದರು ಎಂಬುದನ್ನು ಹೇಳಿದರೆ ದೊಡ್ಡ ಪುಸ್ತಕವೇ ಆಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಭಿವೃದ್ಧಿ ಪತ್ರಿಕೋದ್ಯಮದ ಜನಕ, ಶ್ರೇಷ್ಠ ಪತ್ರಕರ್ತ ಅಂಬೇಡ್ಕರ್: ಟೆಲೆಕ್ಸ್ ರವಿಕುಮಾರ್
ಇದೇ ವೇಳೆ, ಅಲ್ ಅಮೀನ್ ವೈದ್ಯಕೀಯ ಕಾಲೇಜನ್ನು ಬಿಎಲ್‌ಡಿಇ ಸಂಸ್ಥೆಗೆ ಪುಕ್ಕಟ್ಟಿಯಾಗಿ ಅವರು ಕೊಟ್ಟರೂ, ನಮಗೆ ಬೇಡ. ನಾವು ತೆಗೆದುಕೊಳ್ಳುವುದೂ ಇಲ್ಲ ಎಂದು ಹೇಳಿದರು.





