ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಹಶಿಲ್ದಾರ್ ಸುರೇಶ ಮುಂಚೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಸಂಗಮಕ ಸಗರ, “ತಾಲೂಕಿನಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದು, ಸಂಪೂರ್ಣ ನಷ್ಟವಾಗಿದೆ. ವಿಪತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ 8,500 ಮತ್ತು ಕೇಂದ್ರ ಸರ್ಕಾರದಿಂದ 8,500 ರೂ. ಪರಿಹಾರ ನೀಡಬೇಕು. ಆದರೆ, ಕೇಂದ್ರ ಸರ್ಕಾರ ನೀಡಿದ ಪರಿಹಾರದಲ್ಲಿಯೇ 2,000 ಕಡಿತ ಮಾಡಲಾಗಿದೆ. ಇದು ಖಂಡನೀಯ. ಕಡಿತ ಮಾಡಲಾದ ಹಣವನ್ನು ಕೂಡಲೇ ರಾಜ್ಯ ಸರ್ಕಾರ ಸೇರಿಸಿ ಒಟ್ಟಾರೆ 10,500 ರೂ. ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜಬ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ, ನಿಜವಾಗಿ ತಾಲೂಕಿನ ಎಲ್ಲ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಬೇಕು. ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು
ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭ ವಾಗುತ್ತಿರುವುದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಆವ ಶ್ಯಕತೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಸಂಗ್ರಹಿಸಿಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕೂಡಲೇ ಬಗೆಹರಿಸಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು” ಎಂದರು.
ಈ ವೇಳೆ ರೈತ ಸಂಘದ ಗೌರವಾಧ್ಯಕ್ಷ ಗಿರೀಶ ಕುಲಕರ್ಣಿ, ಮಹಿಳಾ ಅಧ್ಯಕ್ಷೆ ಸಂಗೀತಾ ರಾಠೋಡ, ಜಿಲ್ಲಾ ಸಂಚಾಲಕ ನಜೀರ ನಂದರಗಿ, ತಾಲ್ಲೂಕು ಸಂಚಾಲಕ ಮಹಾದೇವ ಕದಮ್, ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬ ಬಾಷಾ ಮನಗೂಳಿ, ಹೊನವಾಡ ಸಂಚಾಲಕ ಖಾದರ ವಾಲಿಕಾರ, ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಗ್ಗರಿ, ಕಾಶಿನಾಥ ದೇವನಾಯಕ, ಸಿದ್ದಪ್ಪ ಕೊಟ್ಟಲಗಿ, ಸುಧಾಕರ ನಲವಡೆ, ಅಮೀನಸಾಬ ಕೋಟಿ, ವಿಲಾಸ ಮಾನವರ, ಅರ್ಜುನ ಸಾಳ್ವಂಕೆ, ಉಮೇಶ ಕದಮ್, ಗಂಗಾರಾಮ ಪವಾರ, ಶ್ರೀಕಾಂತ ಪಾರ, ಸಿದ್ದರಾಯ ಗಗನಮಾಲಿ, ಸಾತಲಿಂಗಯ್ಯ ಸಾಲಿಮಠ, ಇತರರು ಇದ್ದರು.




