ವಿಜಯಪುರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಡಿ ಒಟ್ಟಾರೆ 5,99,322 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಈ ಪೈಕಿ 21,10, 591 ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ಹೇಳಿದರು.
ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ಶಕ್ತಿ ಯೋಜನೆ ಅಡಿ ಜಿಲ್ಲೆಯಲ್ಲಿ ಒಟ್ಟು ₹15.98 ಕೋಟಿ ಲಕ್ಷ ಮಹಿಳಾ ಪ್ರಯಾಣಿಕರು ಹಾಗೂ ಬಾಲಕಿಯರು ವಿಜಯಪುರ ವಿಭಾಗದ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಾರೆ. ಈ ಪ್ರಯಾಣಕ್ಕೆ ಒಟ್ಟು ₹502 ಕೋಟಿ ಮೌಲ್ಯದ ಉಚಿತ ಟಿಕೆಟ್ ವಿತರಣೆ ಮಾಡಲಾಗಿದೆ. ಮಹಾಲಕ್ಷ್ಮಿ ಯೋಜನೆ ಒಟ್ಟು 5,18,398 ಫಲಾನುಭವಿಗಳು ನೋಂದಣಿಯಾಗಿದ್ದು,1,983 ಕೋಟಿ ಅನುದಾನ ಖರ್ಚು ಭರಿಸಿದೆ. ಶೇ. 99.51ರಷ್ಟು ಪ್ರಗತಿಯಾಗಿದೆ” ಎಂದು ಹೇಳಿದರು.
“ಗೃಹಜೋತಿ ಯೋಜನೆ ಒಟ್ಟು 4,55,780 ಗ್ರಾಹಕರು ಅಂದರೆ ಶೇ.97ರಷ್ಟು ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೆ ಗ್ರಾಹಕರಿಗೆ ₹485 ಕೋಟಿ ಮೊತ್ತದ ಉಚಿತ ವಿದ್ಯುತ್ ಪೂರೈಸಲಾಗಿದೆ. ಯುವನಿಧಿ ಯೋಜನೆ ಅಡಿ ಈವರೆಗೆ ಒಟ್ಟು 20,060 ಮಂದಿ ಅಭ್ಯರ್ಥಿಗಳು ನೋಂದಣಿಯಾಗಿದ್ದು, ಇದರಲ್ಲಿ 14,330 ಅರ್ಹ ಫಲಾನುಭವಿಗಳಿಗೆ ಒಟ್ಟು ₹35.7 ಕೋಟಿಯಷ್ಟು ನಿರುದ್ಯೋಗ ಮೊತ್ತವನ್ನು ಜಮೆ ಮಾಡಲಾಗಿದೆ” ಎಂಬ ಮಾಹಿತಿ ನೀಡಿದರು.
“ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, ಪರಿಹಾರ ವಿತರಣಾ ಕ್ರಮ ಜಾರಿಯಲ್ಲಿದೆ. ತಾಲೂಕಿನ ಬರಣಾಪುರ ಮತ್ತು ಮದಬಾವಿ ಗ್ರಾಮ ವ್ಯಾಪ್ತಿ ಪ್ರದೇಶದಲ್ಲಿ ₹348 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣ ಕಾಮಗಾರಿಯು ಸಂಪೂರ್ಣಗೊಂಡಿದೆ. ಅತಿ ಅಗತ್ಯ ಅಗ್ನಿಶಾಮಕ ಯಂತ್ರಗಳು ವಿದೇಶದಿಂದ ಈಗಾಗಲೇ ಬಂದಿವೆ” ಎಂದು ಮಾಹಿತಿ ನೀಡಿದರು.
“ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ₹7,824 ಲಕ್ಷ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪಿಸಿದ 2,607 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಲ್ಲಿ 16,000 ಉದ್ಯೋಗವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಜಿಲ್ಲೆಯಲ್ಲಿ ಒಂದೂವರೆ ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಹಸಿರೀಕರಣ ಮಾಡಲಾಗಿದೆ: ಎಂ ಬಿ ಪಾಟೀಲ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಆಕರ್ಷಕ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ. ಕೆ ಚಾಲನೆ ನೀಡಿದರು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಾ ನಾಯಕ್, ಮೇಯರ್ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನನ್ ಮುಶ್ರೀಫ್, ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪಾರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೋರ ಸೇರಿದಂತೆ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.





