ಸಮಾಜದಲ್ಲಿ ಉತ್ತಮ ಮತ್ತು ಆರೋಗ್ಯ ಪೂರ್ಣ ಪರಿಸರ ಒದಗಿಸಲು ವಿಜ್ಞಾನ, ತಂತ್ರಜ್ಞಾನ ಹಾಗೂ ಸಹಾನಭೂತಿ ಒಗ್ಗೂಡಿ ಸಾಗಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಕುರಿತು ಮಾತನಾಡಿದರು.
ವಿಜಯಪುರ ನಗರದಲ್ಲಿ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ ಎಂ ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಶಿಶುರೋಗ ವಿಭಾಗ, ಭಾರತೀಯ ಚಿಕ್ಕಮಕ್ಕಳ ತಜ್ಞರ ಸಂಘ, ಕರ್ನಾಟಕ ಚಿಕ್ಕಮಕ್ಕಳ ತಜ್ಞರ ತಂಡ ಹಾಗೂ ಡಾ. ಬಿದರಿಯವರ ಅಶ್ವಿನಿ ಇನ್ಸ್‌ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 39ನೇ ದಕ್ಷಿಣ ಭಾರತ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
“ಪ್ರತಿ ಮಗುವಿಗೆ ಜ್ಞಾನ, ನಾವೀನ್ಯತೆ ಮತ್ತು ಆರೈಕೆ ಈ ಬಾರಿಯ ಸಮ್ಮೇಳನದ ಘೋಷವಾಕ್ಯವಾಗಿದೆ. ಇಲ್ಲಿ ಚರ್ಚಿಸುವ ವಿಚಾರಗಳು ಮತ್ತು ಕೈಗೊಳ್ಳುವ ನಿರ್ಣಯಗಳು ಮಕ್ಕಳ ಆರೋಗ್ಯಪೂರ್ಣ ಭವಿಷ್ಯಕ್ಕೆ ಅಗತ್ಯವಾಗಿರಲು ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗಲಿವೆ. ಪ್ರತಿಯೊಂದು ಮಗುವೂ ಆರೋಗ್ಯವಾಗಿ ಬೆಳೆದು ಉತ್ತಮವಾಗಿ ಕಲಿತು, ತನ್ನ ಕನಸನ್ನು ನನಸು ಮಾಡಿಕೊಳ್ಳಲು ಮತ್ತು ಈ ಮೂಲಕ ಭವ್ಯ ಭಾರತಕ್ಕೆ ಕೊಡುಗೆ ನೀಡಲು ಪೂರಕವಾಗಲಿವೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
“ಪ್ರತಿಯೊಂದು ಮಗುವಿನ ಹಿನ್ನೆಲೆ ಅಥವಾ ಭೌಗೋಳಿಕತೆಯನ್ನು ಲೆಕ್ಕಿಸದೆ, ಸಕಾಲಿಕ, ಗುಣಮಟ್ಟ ಹಾಗೂ ಸಮಾನ ಆರೈಕೆಯನ್ನು ಒದಗಿಸುವುದು ಇಂದು ತುರ್ತಾಗಿ ಆಗಬೇಕಿದೆ. ನೀತಿ ನಿರೂಪಕರು, ಶಿಕ್ಷಕರು, ವೈದ್ಯರು ಮತ್ತು ಸಂಶೋಧಕರು ಮಕ್ಕಳನ್ನು ಬದುಕಿಸುವುದು ಮಾತ್ರವಲ್ಲದೇ, ಈ ನಿಟ್ಟಿನಲ್ಲಿ ರೂಪಿಸಬೇಕಿರುವ ಯೋಜನೆಗಳ ಬಗ್ಗೆ ಸಾಮೂಹಿಕವಾಗಿ ಜವಾಬ್ದಾರಿ ವಹಿಸಬೇಕಿದೆ. ಇಂಥ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ಹಿತ ಕಾಪಾಡುವ ಮನಸುಗಳನ್ನು ಒಟ್ಟುಗೂಡಿಸಲು ಸಾಧ್ಯವಾಗುತ್ತದೆ” ಎಂದರು.
“ಹೊಸ ಆಲೋಚನೆಗಳು, ಸಹಯೋಗದ ಸಂಶೋಧನೆ ಮತ್ತು ಸುಧಾರಿತ ಚಿಕಿತ್ಸೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರ್ಣಾಯಕ ಪಾತ್ರ ವಹಿಸುತ್ತವೆ. ಮಕ್ಕಳ ಹಿರಿಯ ತಜ್ಞವೈದ್ಯರು, ಸಂಘದ ಪದಾಧಿಕಾರಿಗಳು, ಉದಯೋನ್ಮುಖ ಯುವ ವೃತ್ತಿಪರ ವೈದ್ಯರು ಇಲ್ಲಿ ಸೇರುವ ಮೂಲಕ ಎಲ್ಲರೂ ಒಗ್ಗೂಡಿ ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಲು, ಚಿಕ್ಕಮಕ್ಕಳ ಕಾಯಿಲೆಗಳನ್ನು ನಿಭಾಯಿಸಲು, ಹದಿಹರೆಯದವರ ಮಕ್ಕಳಲ್ಲಿ ಆರೋಗ್ಯವನ್ನು ಬಲಪಡಿಸುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿದೆ” ಎಂದು ಹೇಳಿದರು.
“ಕರ್ನಾಟಕ ಕೈಗಾರಿಕೆ ಮತ್ತು ಆರ್ಥಿಕವಾಗಿ ಮುಂದುವರೆದಿದ್ದು, ಹೊಸ ಕೈಗಾರಿಕಾ ನೀತಿ 2025-2030 ಮತ್ತು ಕ್ವಿನ್(KWIN) ಸಿಟಿಯಂಥ ಭವಿಷ್ಯಕ್ಕೆ ಸಿದ್ಧವಾದ ಪರಿಸರ ವ್ಯವಸ್ಥೆಗಳನ್ನು ಒದಗಿಸಲು ಈಗಾಗಲೇ ಕ್ರಮ ಕೈಗೊಂಡಿದೆ. ಇದರಲ್ಲಿ ಮಾನವೀಯ ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಅಭಿವೃದ್ಧಿಯೂ ಸೇರಿದೆ. ಉತ್ತಮ ಆರೋಗ್ಯಕ್ಕೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ. ಬಿಎಲ್‌ಡಿಇ ಸಂಸ್ಥೆ ಮತ್ತು ಡೀಮ್ಡ್ ವಿಶ್ವವಿದ್ಯಾಲಯ ಶೈಕ್ಷಣಿಕ ಶ್ರೇಷ್ಠತೆ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆ ಒದಗಿಸಲು ಸಕಲ ರೀತಿಯಲ್ಲಿ ತೊಡಗಿಸಿಕೊಂಡಿದೆ” ಎಂದು ಸಚಿವರು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಡಾ. ಎಸ್ ವಿ ಪಾಟೀಲ ಮಾತನಾಡಿ, “ಜವಾಬ್ದಾರಿ ವಹಿಸಿಕೊಂಡ ನಂತರ ಇಟ್ಟುಕೊಂಡಿದ್ದ ಗುರಿಗಳನ್ನು ಈಡೇರಿಸಿದ್ದೇನೆ. ರಾಜ್ಯದ ಎಲ್ಲ ಜಿಲ್ಲಾ ಘಟಕಗಳನ್ನು ಬಲಪಡಿಸಿದ್ದೇವೆ. ವೃತ್ತಿ ನೈಪುಣ್ಯತೆ ಹೆಚ್ಚಿಸುವುದು ಮತ್ತು ನೀತಿ ಸಂಹಿತೆ ಪಾಲನೆ, ನವಜಾತ ಶಿಶುಗಳ ಆರೋಗ್ಯ ಕಾಪಾಡುವುದು, ಮಕ್ಕಳ ಆರೋಗ್ಯ ಸಂರಕ್ಷಣೆ ಚಟುವಟಿಕೆಗಳಿಗೆ ಕಳೆದ ಒಂದು ವರ್ಷದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಡಾ. ಯೋಗೇಶ ಪಾರೀಖ ಮಾತನಾಡಿ, “ಕರ್ನಾಟಕ ಚಿಕ್ಕಮಕ್ಕಳ ತಜ್ಞರ ಸಂಘ ಅತ್ಯುತ್ತಮವಾಗಿ ಕೆಲಸ ಮಾಡಿದೆ” ಎಂದು ಶ್ಲಾಘಿಸಿದರು.
ಇದೇ ವೇಳೆ ಸಚಿವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಂಘದ ರಾಜ್ಯ ಕಾರ್ಯದರ್ಶಿ ಡಾ. ಸಿದ್ದು ಚರಕಿ ವರದಿ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ರಾತ್ರಿ ಪೂರ್ತಿ ಅಕ್ರಮವಾಗಿ ಮರಳು ಸಾಗಾಟ; ಅರಣ್ಯ ಇಲಾಖೆಯ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ ಎಂ ಜಯರಾಜ, ಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್ ವಿ ಕುಲಕರ್ಣಿ, ಪ್ರಭಾರ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ, ಚಿಕ್ಕಮಕ್ಕಳ ತಜ್ಞರ ಸಂಘದ ರಾಷ್ಟ್ರ ಮತ್ತು ರಾಜ್ಯ ಘಟಕಗಳ ಪದಾಧಿಕಾರಿಗಳಾದ ಡಾ. ಬಸವರಾಜ ಜಿ ವಿ, ಡಾ. ಸಂತೋಷ ಸೊನ್ಸ, ಡಾ. ಪ್ರೀತಿ ಗಲಗಲಿ, ಡಾ. ಕೆ ರಾಜೇಂದ್ರನ, ಡಾ. ಅಭಿಷೇಕ ಫಡಕೆ, ಡಾ. ಎಲ್ ಎಚ್ ಬಿದರಿ, ಮಾಜಿ ಶಾಸಕ ಮತ್ತು ಚಿಕ್ಕಮಕ್ಕಳ ತಜ್ಞ ಡಾ. ಸಾರ್ವಭೌಮ ಬಗಲಿ, ಡಾ. ಆರ್ ಟಿ ಪಾಟೀಲ, ಡಾ. ಎಂ ಎಂ ಪಾಟೀಲ, ಡಾ. ಎಸ್ ಎಸ್ ಕಲ್ಯಾಣಶೆಟ್ಟರ, ಡಾ. ಪರೀಕ್ಷಿತ ಕೋಟಿ, ಡಾ. ಶ್ರೀಶೈಲ ಗಿಡಗಂಟಿ, ಡಾ. ರವಿ ಬರಡೋಲ, ಡಾ. ಎಂ ವೆಂಕಟಾಚಲಪತಿ, ಡಾ. ಸಿಂಗಾರವೇಲು, ಡಾ. ನಂದೀಶ ಬಿ, ಡಾ. ದುರ್ಗಪ್ಪ, ಡಾ. ವಿಡಿ ಪಾಟೀಲ ಸೇರಿದಂತೆ ಇತರರು ಇದ್ದರು.





