ವಿದ್ಯಾರ್ಥಿನಿಯರು ತಮ್ಮ ಪಠ್ಯಗಳ ಜತೆಗೆ ಇತರೆ ಕೌಶಲ್ಯಗಳನ್ನು ಕಲಿತುಕೊಳ್ಳುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಸಲಹೆ ನೀಡಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಉನ್ನತ ಶಿಕ್ಷಣ ಮಂಡಳಿ, ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕರ್ನಾಟಕ ಸರ್ಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕಾಗ್ನಿಟಿವ್ ಟೆಕ್ನಿಕಲ್ ಅಂಡ್ ಮ್ಯಾನೇಜಿರಿಯಲ್ ಸ್ಕಿಲ್ಸ್ ಫಾರ್ ವುಮೆನ್ ಎಂಪವರ್‌ಮೆಂಟ್ ಫ್ರೀ ವಿಕಸಿತ್ ಭಾರತ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿಗಳಿದ್ದರೆ ಸಾಲದು, ಉನ್ನತ ಪದವಿಗಳ ಜತೆಗೆ ಕೌಶಲಗಳನ್ನೂ ಕಲಿತುಕೊಂಡಿದ್ದರೆ ಉದ್ಯೋಗ ದೊರಕಿಸಿಕೊಳ್ಳಲು ಸುಲಭವಾಗುತ್ತದೆ” ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣವರ ಮಹಿಳಾ ಸಬಲೀಕರಣದಲ್ಲಿ ಮಹಿಳಾ ಕೌಶಲ್ಯದ ಮಹತ್ವದ ಕುರಿತು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಇತರ ರಾಜ್ಯಗಳ ಹೇರಿಕೆಯಿಂದ ಕನ್ನಡ ರಕ್ಷಿಸುವುದು ನಮ್ಮ ಕರ್ತವ್ಯ: ಶಾಸಕ ಎಂ. ಆರ್. ಪಾಟೀಲ
ಈ ಕಾರ್ಯಾಗಾರದಲ್ಲಿ ಒಟ್ಟು ಮೂರು ವಿಚಾರ ಗೋಷ್ಟಿಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಕೆ ಬಿ ರಂಗಪ್ಪ, ಪ್ರೊ. ಬಸವರಾಜ ಎಸ್ ಬೇಣಿ, ಪ್ರೊ. ಆರ್ ವಿ ಗಂಗಶೆಟ್ಟಿ ಭಾಗವಹಿಸಿದ್ದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಡಿ ಎಂ ಮದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಯೋಜಕ ಡಾ. ಸುರೇಶ ಕೆ ಪಿ, ಪ್ರೊ. ಜಿ ಬಿ ಸೋನಾರ ಉಪಸ್ಥಿತರಿದ್ದರು.
ಮಾಬುಬಿ ಮುಲ್ಲಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ರೇಣುಕಾ ಮಾಡಿದರು. ಅತಿಥಿ ಉಪನ್ಯಾಸಕಿ ಶೈಲಾ ಪಾಟೀಲ ವಂದಿಸಿದರು. ಅಶ್ವಿನಿ ಎ ಲಾಯದಗುಂದಿ ಕಾರ್ಯಕ್ರಮ ನಿರೂಪಿಸಿದರು.





