ವಿಜ್ಞಾನಿ ಮೇರಿ ಕ್ಯೂರಿಯ ಜನ್ಮದಿನವನ್ನು ಕ್ಯಾನ್ಸರ್ ದಿನವನ್ನಾಗಿ ಆಚರಿಸುವ ಮೂಲಕ, ಮಹಿಳೆಯರು ಆರೋಗ್ಯದ ಬಗ್ಗೆ ಜಾಗೃತರಾಗಬೇಕೆಂದು ಡಾ.ಹಿತೇಂದ್ರ ನಾಯಕ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯ, ಹಾಗೂ ಎನ್ ಎಸ್ ಎಸ್ ಕೋಶಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಿಗಾಗಿ “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ಶಿಬಿರ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮಹಿಳೆಯರ ಆರೋಗ್ಯದಲ್ಲಿ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಕಾಯಿಲೆಯೆಂದರೆ ಕ್ಯಾನ್ಸರ್. ಇಂದಿನ ಯುಗದಲ್ಲಿ ವಿಶೇಷವಾಗಿ ಗರ್ಭಕಂಠ ಮತ್ತು ಸ್ತನಗಳ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣ ತಪ್ಪಿ ಅತಿಯಾಗಿ ವೃದ್ಧಿ ಪಡುವ ಕಾಯಿಲೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗೆ ಹಲವು ಕಾರಣಗಳಿವೆ. ಅಸಮರ್ಪಕ ಜೀವನಶೈಲಿ, ಅಶುದ್ಧತೆ, ಜನನಾಂಗದ ಸೋಂಕುಗಳು, ಹಾರ್ಮೋನ್ ಅಸಮತೋಲನ, ತಂಬಾಕು ಸೇವನೆ, ಮದ್ಯಪಾನ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆ ಇವು ಪ್ರಮುಖ ಕಾರಣಗಳಾಗಿವೆ. ಕ್ಯಾನ್ಸರ್ ಬರದಂತೆ ತಡೆಯಲು ಆರೋಗ್ಯಕರ ಆಹಾರ, ನಿತ್ಯ ವ್ಯಾಯಾಮ, ಸ್ವಚ್ಛತೆ, ಮತ್ತು ತಪಾಸಣೆಗಳು ಅತ್ಯಂತ ಮುಖ್ಯ. ವರ್ಷಕ್ಕೊಮ್ಮೆ ವೈದ್ಯರ ಸಲಹೆಯ ಮೇರೆಗೆ ಗರ್ಭಕಂಠದ ಪರೀಕ್ಷೆ ಮತ್ತು ಸ್ತನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ” ಎಂದರು.
ಇದನ್ನೂ ಓದಿ: ವಿಜಯಪುರ | ಅಸಂಘಟಿತ ಕಾರ್ಮಿಕರಿಗೆ ₹36,000ಗಳ ಕನಿಷ್ಠ ವೇತನಕ್ಕೆ CITU ಆಗ್ರಹ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಜ್ಯೋತಿ ಉಪಾಧ್ಯಾಯ, ಡಾ ತಹಮಿನಾ ಕೋಲಾರ, ಪ್ರೊ. ಅಶೋಕ ಸುರಪುರ, ಡಾ. ಪುಷ್ಪಾ ಹೀರೆಮಠ, ಅನಿತಾ ಎ, ಅನಿತಾ ಕಾಳೆ, ಡಾ.ಸುರೇಖಾ ರಾಠೋಡ, ಡಾ.ಭಾಗ್ಯಶ್ರೀ, ಡಾ ಸರೋಜಾ ಸಂತಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು ಮತ್ತು ವಸತಿ ನಿಲಯದ ನಿಲಯಪಾಲಕರು ಮತ್ತಿತರಿದ್ದರು.





