ಮಾನಸಿಕ ಆರೋಗ್ಯದಲ್ಲಿ ಸದೃಢತೆ ಸಾಧಿಸುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯಪುರ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಸಮಾಜ ಕಾರ್ಯ ವಿಭಾಗ, ಭಾರತದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ʼಮಾನಸಿಕ ಬೆಂಬಲ ಹೊಂದಲು ಆಪ್ತಸಮಾಲೋಚನೆʼ ವಿಷಯದ ಕುರಿತ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬದಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಪರಿಣಾಮವಾಗಿ ವಿದ್ಯಾರ್ಥಿನಿಯರು ವಿವಿಧ ಕಾರಣಗಳಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಮಸ್ಯೆಗಳನ್ನು ಎದುರಿಸಲು ಮನೋಧೈರ್ಯ ಕೊರತೆಯಿಂದ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಾನಸಿಕ ಸಮಸ್ಯೆಗಳಿಗಾಗಿ ಆಪ್ತಸಮಾಲೋಚನಾ ಸೇವೆಯನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ” ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ್ದ, ವಿಜಯಪುರದ ಬಿ ಎಮ್ ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂತೋಷ ರಾಮದುರ್ಗ ಮಾತನಾಡಿ, “ಮಾನಸಿಕ ಪ್ರಥಮ ಚಿಕಿತ್ಸೆ, ಒತ್ತಡ ಅಥವಾ ತುರ್ತುಸ್ಥಿತಿಯ ಸಂದರ್ಭದಲ್ಲಿರುವವರಿಗೆ ನೀಡಲಾಗುವ ತಕ್ಷಣದ ಸಹಾಯವಾಗಿದೆ. ಮಾನವ ನಿರ್ಮಿತ ವಿಪತ್ತು, ಯುದ್ಧ, ಅಪಘಾತ ಅಥವಾ ವೈಯಕ್ತಿಕ ನಷ್ಟದಿಂದ ಬಳಲುವವರಿಗೆ ಇದು ಮಾನವೀಯ ಹಾಗೂ ಪ್ರಾಯೋಗಿಕ ಬೆಂಬಲವಾಗಿದೆ. ಸುರಕ್ಷತೆ, ಶಾಂತಿ, ಭರವಸೆ ಮತ್ತು ಆತ್ಮವಿಶ್ವಾಸವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
ವಿಜಯಪುರದ ಬಿಎಮ್ ಪಾಟೀಲ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ಗೌತಮಿ ಎಸ್ಜಿ ಮಾತನಾಡಿ, “ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯವು ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಸಂಪರ್ಕ, ಕುಟುಂಬ-ಸ್ನೇಹಿತರ ಬೆಂಬಲ ಮತ್ತು ಅಗತ್ಯವಿದ್ದಾಗ ವೃತ್ತಿಪರರ ಸಹಾಯ ಪಡೆಯುವುದರಿಂದ ಮಾನಸಿಕ ಒತ್ತಡವನ್ನು ನಿಭಾಯಿಸಬಹುದು, ಅಷ್ಟೇ ಅಲ್ಲದೇ ಆರೋಗ್ಯಕರ ಮನೋಭಾವವು ವ್ಯಕ್ತಿಯ ಉತ್ಪಾದಕತೆ ಮತ್ತು ಸಮತೋಲನಯುತ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ನಾವು ಬೇಡ ಅಂದ್ರೂ ಸರ್ಕಾರ ಉಳಿಯುತ್ತೆ: ಸಚಿವ ಶಿವನಾಂದ ಪಾಟೀಲ
ಡಿಮ್ಯಾನ್ಸ್ ವಿಭಾಗದ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ್ ಪಾಟೀಲ ಮಾತನಾಡಿ, “ಇಂದಿನ ಒತ್ತಡಭರಿತ ಜೀವನದಲ್ಲಿ ಮಹಿಳೆಯರು ಸ್ವ–ಆರೈಕೆಗೆ ಆದ್ಯತೆ ನೀಡುವುದು ಅತ್ಯಂತ ಅವಶ್ಯಕ. ದೈಹಿಕ ಮತ್ತು ಭಾವನಾತ್ಮಕವಾಗಿ ಸ್ವತಃ ತಮಗಾಗಿ ತಾವೇ ಸಮಯ ನೀಡದಿದ್ದರೆ ಅದು ಆರೋಗ್ಯ ಮತ್ತು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸ್ವ–ಅರಿವು ಮತ್ತು ಸ್ವ–ಆರೈಕೆಯ ಮೂಲಕ ಮಾತ್ರ ವ್ಯಕ್ತಿ ಉತ್ತಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಡಾ. ಕಲಾವತಿ ಎಚ್ ಕಾಂಬಳೆ, ಡಾ. ರಮೇಶ ಎಮ್ ಸೊನಕಾಂಬಳೆ, ಶರಣಬಸು ಕೊಡಬಾಗಿ, ಎಸ್ ಆರ್ ಪಾಟೀಲ ಸಮಾಜಕಾರ್ಯ ವಿಭಾಗದ ಎಲ್ಲ ಭೋದಕ, ಭೋದಕೇತರ ಸಿಬ್ಬಂದಿಗಳು, ಹಾಗೂ ವಿವಿಧ ಸ್ನಾತಕ ವಿಭಾಗಗಳ ಉಪನ್ಯಾಸಕರು ಮತ್ತಿತರರಿದ್ದರು.





