ವಿಜಯಪುರ ಜಿಲ್ಲೆಯ ಸುಸ್ಥಿರ ಹೈನುಗಾರಿಕೆಗಾಗಿ ಕ್ಷೀರ ಪೈಲೆಟ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಪೈಲೆಟ್ ಯೋಜನೆಗೆ ಆಯ್ಕೆಯಾಗಿರುವ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ನಗರದಲ್ಲಿ ಬಿಎಲ್‌ಡಿಇ ಸಂಸ್ಥೆ, ಕೃಷಿ ಕಲ್ಪ ಫೌಂಡೇಶನ್ ಹಾಗೂ ಅಕ್ಷಯ ಕಲ್ಪ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ಅನುಷ್ಠಾನಿಸಿರುವ ಕ್ಷೀರ ಪೈಲೆಟ್ ಯೋಜನೆಯಡಿ ಮಕ್ಕಳಿಗೆ ಹಾಲು ಕೊಡಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
“ಪ್ರಶಾಂತ್ ಪ್ರಕಾಶ್ ಅವರು ನವೋದ್ಯಮಿಗಳಿಗೆ ಸ್ಟಾರ್ಟಪ್ ಮೂಲಕ ಉದ್ಯಮ ಪ್ರಾರಂಭಿಸಲು ನೆರವಾಗುತ್ತಿದ್ದಾರೆ. ಅವರು ಈ ಯೋಜನೆಗೆ ಕೈಜೋಡಿಸಿರುವುದು ಸಂತಸ ತಂದಿದೆ. “ಮುಂದಿನ ಐದು ವರ್ಷಗಳಲ್ಲಿ ವಿಜಯಪುರ ಜಿಲ್ಲೆ, ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆಯ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲಿದೆ. ಇದು ರೈತಪರ, ಮಹಿಳೆಯ ಪರ, ಯುವಕರ ಪರ ಮತ್ತು ಪಕ್ಷಾತೀತ ಯೋಜನೆಯಾಗಿದೆ. ನಾವು ಕೈಗೊಂಡ ಕೋಟಿ ವೃಕ್ಷ ಅಭಿಯಾನದಂತೆ ಎಲ್ಲರೂ ಇದರಲ್ಲಿ ತೊಡಗಿಕೊಳ್ಳಬೇಕು. ಈ ಕ್ಷಣ ಯೋಜನೆಯಡಿ ಸಣ್ಣದಾಗಿ ಹೈನುಗಾರಿಕೆ ಪ್ರಾರಂಭಿಸಿ ಲೋಪ ದೋಷ ಸರಿಪಡಿಸಿಕೊಂಡು ಹೈನುಗಾರಿಕೆ ವಿಸ್ತರಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಯುವಕರು ಕೂಡ ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮತ್ತು ಈ ಮೂಲಕ ತೋಟಗಾರಿಕೆ, ಹೈನುಗಾರಿಕೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಲು ಇದು ನೆರವಾಗಲಿದೆ” ಎಂದರು.
ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಕಂಪನಿ ಸಿಇಒ ಪ್ರಶಾಂತ ಪ್ರಕಾಶ್ ಮಾತನಾಡಿ, “ಕಳೆದ 15 ರಿಂದ 20 ವರ್ಷಗಳ ಕಾಲ ನವ ಉದ್ಯಮಗಳಿಗೆ ಉತ್ತೇಜನ ನೀಡಿ ನಗರಾಭಿವೃದ್ಧಿ ಮಾಡುವತ್ತ ಗಮನ ಹರಿಸಿದ್ದೆ. ಸಚಿವ ಎಂಬಿ ಪಾಟೀಲ ಅವರ ಸಹಯೋಗದಲ್ಲಿ ಈಗ ಗ್ರಾಮೀಣ ಭಾಗಗಳಲ್ಲಿಯೂ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲು ಬಿ ಎಲ್ ಡಿ ಇ ಡಿ ಯ ಕುಲಾಧಿಪತಿ ಬಸನಗೌಡ ಪಾಟೀಲ್ ನನ್ನ ಜೊತೆ ಹದಿನೈದು ಸಭೆಗಳನ್ನು ಮಾಡಿದ್ದಾರೆ. ತಂತ್ರಜ್ಞಾನ ಬಳಸಿ ಹಾಲು ಉತ್ಪಾದನೆ ಹೆಚ್ಚಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಜಿಲ್ಲೆಯ ಜನ ಕಾಯಕ ನಿಷ್ಠರಾಗಿದ್ದು, ಮುಂಬರುವ ದಿನಗಳಲ್ಲಿ ಶ್ವೇತ ಕ್ರಾಂತಿಗೂ ಕೊಡುಗೆ ನೀಡಲಿದ್ದಾರೆ” ಎಂದರು.
ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ
ಈ ವೇಳೆ ಕೃಷಿ ಕಲ್ಪ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಎಂ ಪಾಟೀಲ, ಜಿಲ್ಲಾಧಿಕಾರಿ ಡಾ ಆನಂದ ಕೆ, ವಿಜಯಪುರ ಮತ್ತು ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈರನಗೌಡ ಕರಿಗೌಡ, ಡಾ. ಮಹಾಂತೇಶ ಬಿರಾದಾರ, ಭಾಗ ವಿಜಯಪುರ ಬಾಗಲಕೋಟೆ ಹಾಲ್ ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭು ರಾಜ ಹಿರೇಮಠ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಅಶೋಕ ಗುಣಸಗಿ ರೈತರೊಂದಿಗೆ ಕ್ಷೀರ ಯೋಜನೆ ಕುರಿತು ಸಂವಾದ ನಡೆಸಿದರು. ಉಪನ್ಯಾಸಕ ಸುಭಾಷ್ ಕಣ್ಣೂರ್ ಮತ್ತು ಕೃಷಿಕಲ್ಪ ಫೌಂಡೇಶನ್ ವೀರಣ್ಣ ರೊಟ್ಟಿ ಇದ್ದರು.





