ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದು ವಿದ್ಯಾರ್ಥಿನಿಯರು ಈ ಸಾಧಕರ ಮಾದರಿಯನ್ನಾಗಿಟ್ಟುಕೊಂಡು ದೃಢಸಂಕಲ್ಪ ಬೆಳೆಸಿಕೊಳ್ಳುವುದರ ಜೊತೆಗೆ ಮುಂದೆ ಸಾಗಬೇಕು ಎಂದು ಜಿಲ್ಲೆಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮುಖ್ಯಸ್ಥ ಪ್ರೊ. ಎಸ್.ಜಿ.ರೂಡಗಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಯುತ್ ರೆಡ್ ಕ್ರಾಸ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ʼರಾಷ್ಟ್ರೀಯ ಹೆಣ್ಣು ಮಕ್ಕಳ ದಿನ-2024ʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಯನಿರ್ವಾಹಕ ಮಂಡಳಿಯ ಅಧಿಕಾರಿ ಡಾ.ಭಕ್ತಿ ಮಹೀಂದ್ರಕರ್ ಮಾತನಾಡಿ ಹೆಣ್ಣು ಮಕ್ಕಳಿಗೆ ಇರುವ ಸೌಲಭ್ಯಗಳ ಕುರಿತು ವಿವರಿಸಿದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಿ. ಗಂಗೆಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಬೆಳವಣಿಗಾಗಿ ಹಲವಾರು ರೀತಿಯ ಸರ್ಕಾರದ ಸೌಲಭ್ಯಗಳು ಜಾರಿಗೊಳಿಸುತ್ತಿದ್ದು ಈ ಯೋಜನೆಗಳ ಸದುಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಯುತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಪ್ರೊ. ಅನಿತಾ ನಾಟಿಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಹೈಜಿನ್ ಕಿಟ್‌ಗಳನ್ನು ವಿತರಿಸಲಾಯಿತು. ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




