ಎಸ್‌ಸಿಪಿ – ಟಿಎಸ್‌ಪಿ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸೌಲಭ್ಯ ದೊರಕಿಸಲು ಯಾವುದೇ ವಿಳಂಬವಿಲ್ಲದೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ 2025-26ನೇ ಸಾಲಿನ ವಿಷೇಶ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖೆವಾರು ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಂಬಂಧಿಸಿದ ಇಲಾಖೆಗಳು ಎಸ್‌ಸಿಪಿ – ಟಿಎಸ್‌ಪಿ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದರೆ ಶೋಕಾಸ್ ನೋಟೀಸ್ ನೀಡಲು ಹಾಗೂ ನಿಗಧಿತ ಅವಧಿಯಲ್ಲಿ ಎಸ್‌ಸಿಪಿ – ಟಿಎಸ್‌ಪಿ ಅನುದಾನ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡಲ್ಲಿ ಕ್ರಮ ಜರಗಿಸಲು ಅವಕಾಶವಿದೆ. ಆದ್ದರಿಂದ ಅರ್ಹರಿಗೆ ಸೌಲಭ್ಯ ದೊರಕಿಸಲು ಅನುದಾನ ವೆಚ್ಚ ಮಾಡಿ” ಎಂದು ಸೂಚಿಸಿದರು.
ಇದನ್ನೂ ಓದಿ: ವಿಜಯಪುರ | ಬೆಳೆಹಾನಿ ಪರಿಹಾರಕ್ಕೆ ರೈತ ಸಂಘಟನೆಗಳ ಆಗ್ರಹ
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸಿ, ಪರಿಶೀಲನೆ ನಡೆಸಬೇಕು. ಜಿಪಂ ಸಿ ಇ ಒ ಅವರು ಕಾಲಕಾಲಕ್ಕೆ, ಅತ್ಯಂತ ಪ್ರಮುಖ ಇಲಾಖೆಗಳಾದ ಶಿಕ್ಷಣ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.





