ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ವೈದ್ಯಕೀಯ ಕಾಲೇಜು ಆರಂಭಿಸುವುದರಿಂದ ಬಡವರ ಶೋಷಣೆಯಾಗಲಿದೆ. ಇದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಹಾಗಾಗಿ ಇಂತಹ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ನಿಲುವು ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, “ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ಅನಿವಾರ್ಯತೆ ಇಲ್ಲ. ಒಂದು ವೇಳೆ ಈ ಮಾದರಿಯಲ್ಲಿ ಕಾಲೇಜು ಸ್ಥಾಪನೆಯಾದರೆ ಬಡವರ ಶೋಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ನಿರ್ಧಾರವನ್ನು ಸಂಪುಟ ಸಭೆಯಲ್ಲೂ ವ್ಯಕ್ತಪಡಿಸಿದ್ದೇನೆ. ಸಿಎಂ ಅವರಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವೆ” ಎಂದು ಹೇಳಿದರು.
”ವಿಜಯಪುರ ಜಿಲ್ಲಾಸ್ಪತ್ರೆ 140 ಎಕರೆ ಜಾಗದ ವಿಶಾಲ ಕ್ಯಾಂಪಸ್ ಹೊಂದಿದೆ. ಟ್ರಾಮಾ ಸೆಂಟರ್, ಕ್ಯಾನ್ಸರ್ ಚಿಕಿತ್ಸಾ ಘಟಕ, ಸೂಪರ್ ಸ್ಪೆಷಾಲಿಟಿ ಸೆಂಟರ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಕಾದ ಸಕಲ ಸೌಲಭ್ಯಗಳಿರುವಾಗ ಖಾಸಗಿಯವರಿಗೆ ಮಣೆಹಾಕುವ ಅವಶ್ಯಕತೆ ಇಲ್ಲ” ಎಂದರು.
“ಖಾಸಗಿ ಸಹಭಾಗಿತ್ವ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಈ ಹಿಂದೆಯೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿದ್ದೇನೆ. ಅವಶ್ಯಕತೆ ಇದ್ದರೆ ಇನ್ನೊಮ್ಮೆ ಪತ್ರ ಬರೆಯುವೆ” ಎಂದು ಹೇಳಿದರು.
“ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಟ್ರಾಮಾ ಸೆಂಟರ್, 300 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಘಟಕ ಆರಂಭಿಸಲು ದಿವ್ಯ ಸಂಕಲ್ಪ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಇವುಗಳಿಗೆ ಸಿಬ್ಬಂದಿಯನ್ನೇ ಕೊಡಲಿಲ್ಲ. ಕಾರ್ಯಾರಂಭ ಮಾಡುವಂತೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಶಿವಾನಂದ ಪಾಟೀಲ ತಿಳಿಸಿದರು.
“ನನಗೆ ಕ್ರೆಡಿಟ್ ಬರುವುದನ್ನು ತಪ್ಪಿಸಲು ವಿಳಂಬವಾಗುತ್ತಿದೆಯೇನೋ ಎಂದು ನೋವಾಗುತ್ತದೆ. ಆದರೆ ನಾನು ಕ್ರೆಡಿಟ್‌ಗಾಗಿ ಮಾಡಿಲ್ಲ. ಜನರ ಒಳಿತಿಗಾಗಿ ಇದನ್ನು ಮಾಡಿದ್ದೇನೆ. ನನಗೆ ಕ್ರೆಡಿಟ್ ಬರುತ್ತದೆಯೆಂದು ಯೋಚಿಸುವವರು ಬೇಕಾದರೆ ತಾವೇ ಕ್ರೆಡಿಟ್ ತೆಗೆದುಕೊಂಡರೂ ಚಿಂತೆಯಿಲ್ಲ; ಜನರಿಗಾಗಿ ಈ ಕಾರ್ಯ ಮಾಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ನಾಡ ಹಬ್ಬದಲ್ಲಿ ಜಾತಿ-ಧರ್ಮ ತರೋದು ಸರಿಯಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಏಮ್ಸ್ ತರಲಿ ‘ಸಂಸದರಿಗೆ ಗೋಳಗುಮ್ಮಟವನ್ನಂತೂ ಕಟ್ಟಲು ಆಗಲ್ಲ, ಕೊನೆಪಕ್ಷ ಏಮ್ಸ್ ಕಾಲೇಜು ವಿಜಯಪುರದಲ್ಲಿ ಸ್ಥಾಪನೆಯಾಗುವಂತೆ ಮಾಡಲು ಕೇಂದ್ರ ಸರ್ಕಾರದ ಮನವೊಲಿಸಲಿ” ಎಂದು ಸಚಿವ ಶಿವಾನಂದ ಪಾಟೀಲ ಅವರು ಸಂಸದ ರಮೇಶ್ ಜಿಗಜಿಣಗಿಯವರಿಗೆ ಒತ್ತಾಯಿಸಿದರು.
”ಈಗಾಗಲೇ ಧಾರವಾಡದಲ್ಲಿ ಐಐಟಿ ಸೇರಿದಂತೆ ಅನೇಕ ಪ್ರತಿಷ್ಠಿತ ಕಾಲೇಜುಗಳು ಸ್ಥಾಪನೆಯಾಗಿವೆ. ಉತ್ತರ ಕರ್ನಾಟಕದ ಕೊನೆಯ ಜಿಲ್ಲೆಯಾದ ವಿಜಯಪುರದಲ್ಲಿ ಏಮ್ಸ್ ಸ್ಥಾಪನೆಯಾದರೆ ಅತ್ಯಂತ ಅನುಕೂಲವಾಗುತ್ತದೆ. ಈ ಬಗ್ಗೆ ಸಂಸದರು ಗಂಭೀರವಾಗಿ ಪರಿಗಣಿಸಬೇಕು. ಬೇಡಿಕೆ ಕುರಿತು ಅವರಿಗೂ ಪತ್ರ ಬರೆಯುತ್ತೇನೆ” ಎಂದು ತಿಳಿಸಿದರು.





