ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಜನಪರ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಲು ವಿಜಯಪುರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಎಲ್‌ಇಡಿ ಕಲಾ ಜಾಥಾ ಪ್ರದರ್ಶನ ಸಂಚಾರಿ ವಾಹನಕ್ಕೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, “ರಾಜ್ಯ ಸರ್ಕಾರವು ಜನರ ಜೀವನ ಮಟ್ಟ ಉತ್ತಮ ಪಡಿಸಲು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಐದು ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆ ಬಡಜನರ ಜೀವನ ಮಟ್ಟವನ್ನು ಆರ್ಥಿಕವಾಗಿ ಸಬಲಗೊಳಿಸಲು ಸಹಕಾರಿಯಾಗಿವೆ. ಈ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿ ನಾಟಕ, ಜಾನಪದ ಕಲಾ ತಂಡಗಳು ಹಾಗೂ ಕಲಾ ಜಾಥಾ ಮೂಲಕ ಆಯೋಜಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ” ಎಂದರು.
“ಈ ಕಲಾ ಜಾಥಾ ಪ್ರದರ್ಶನ ಸಂಚಾರಿ ವಾಹನವು ಜಿಲ್ಲೆಯ ವಿವಿಧ ಗ್ರಾಮಪಂಚಾಯತಿ ವ್ಯಾಪ್ತಿಯ 20 ಗ್ರಾಮಗಳಲ್ಲಿ ಡಿಸೆಂಬರ್ 18ರವರೆಗೆ ಎರಡು ಎಲ್‌ಇಡಿ ವಾಹನಗಳ ಮೂಲಕ ಸಂಚರಿಸಿ ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ” ಎಂದು ಮಾಹಿತಿ ನೀಡಿದರು.

ಮಲಘಾಣ, ಕಲಗುರ್ಕಿ, ಕೂಡಗಿ, ಮುತ್ತಗಿ, ಸಂಕನಾಳ, ಸಾತಿಹಾಳ, ಡೋಣೂರ, ಎಂಭತ್ನಾಳ, ಹಡಗಲಿ, ಕಗ್ಗೋಡ, ಮಧಬಾವಿ, ನಾಗಠಾಣ, ಅಥರ್ಗಾ, ತಡವಲಗಾ, ಲಿಂಗದಳ್ಳಿ, ನಿಂಬಾಳ, ಹೊರ್ತಿ, ಸಣಕನಹಳ್ಳಿ, ಕನ್ನಾಳ ಹಾಗೂ ಅರಕೇರಿ ಗ್ರಾಮಗಳಲ್ಲಿ ಸಂಚರಿಸಿ ಬೀದಿ ನಾಟಕ ಹಾಗೂ ಜಾನಪದ ಕಲಾತಂಡಗಳ ಕಲಾವಿದರು ಈ ಯೋಜನೆಗಳ ಕುರಿತು ಗೀತೆಗಳು, ಎಲ್‌ಇಡಿ ವಾಹನ, ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸುವರು. ಈ ಕಾರ್ಯಕ್ರಮ ಚಾಲನಾ ಸಂದರ್ಭದಲ್ಲಿ ವಿವಿಧ ಕಲಾವಿದರು ಪಂಚ ಗ್ಯಾರಂಟಿ ಯೋಜನೆಯ ಬೀದಿ ನಾಟಕ ಹಾಗೂ ಗೀತೆಗಳ ಪ್ರದರ್ಶನ ನೀಡಿದರು.
ಇದನ್ನೂ ಓದಿ: ವಿಜಯಪುರ | ನಕಲಿ ವೈದ್ಯರ ಪತ್ತೆ; 22 ಕ್ಲಿನಿಕ್‌ಗೆ ಬೀಗ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೊರಣ್ಣವರ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ಎಸ್ ಎಸ್ ನಾಯಕಲಮಠ, ಸುರೇಶ ಚಾವಲರ, ಪ್ರೇಮಕುಮಾರ ಪವಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಶಿರಸ್ತೇದಾರ ಸಲೀಂ ಬಿಜಾಪುರ, ಸಚ್ಚಿದಾನಂದ ತೇರದಾಳ, ರಾಜು ಹಾದಿಮನಿ, ಡಿ ಎಂ ಕರ್ನಾಳ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.





