ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಕಳೆದ 31 ದಿನಗಳಿಂದ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಮುಖಂಡ ಅಶೋಕ ಗೌಡ ಪಾಟೀಲ್ ನೇತೃತ್ವದಲ್ಲಿ ನಿರಾಶ್ರಿತರು ನಡೆಸುತ್ತಿದ್ದ ಧರಣಿಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಹಿಂಪಡೆಯಲಾಗಿದೆ.
ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದಲ್ಲಿ ಎಳವಾರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಭಿವೃದ್ಧಿ ಅಗಲೀಕರಣ ನೆಪದಲ್ಲಿ ತೆರವುಗೊಳಿಸಿದ 143ಕ್ಕೂ ಅಧಿಕ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನಿರಾಶ್ರಿತರು ಕಳೆದ 9 ದಿನಗಳಿಂದ ಧರಣಿ ಆರಂಭಿಸಿದ್ದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಇ ಸಿ ಎಸ್ ಪೊಲೀಸ್ ಪಾಟೀಲ, ತಾಪಂ ಇಒ ಪ್ರಕಾಶ ದೇಸಾಯಿ ಭೇಟಿ ನೀಡಿ ಧರಣಿ ನಿರತರನ್ನು ಮನವೊಲಿಸಿದರು.
ನಿರಾಶ್ರಿತರನ್ನು ಉದ್ದೇಶಿಸಿ ಸಿ ಎಸ್ ಪೊಲೀಸ್ ಪಾಟೀಲ ಮಾತನಾಡಿ, “ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದಲ್ಲಿ ಜಿಲ್ಲಾ ಮುಖ್ಯರಸ್ತೆ ನಿರ್ಮಾಣ ಕಾಮಗಾರಿ ಆರಂಭ ಮಾಡುವ ಸಂದರ್ಭದಲ್ಲಿ ಕೆಲವು ಮನೆಗಳನ್ನು ತೆರವುಗೊಳಿಸಲು ಕುರಿತು ಆಯಾ ಮನೆಗಳಿಗೆ ತಿಳಿಸಲಾಗಿತ್ತು. ಆಗ ಅವರು ಸುಮ್ಮನೆ ಇದ್ದ ಪರಿಣಾಮ ಕಾಮಗಾರಿ ಆರಂಭಿಸಿ ಮನೆಗಳನ್ನು ತೆರವುಗೊಳಿಸಲಾಗಿದೆ. ಯಾರಿಗೂ ಅನ್ಯಾಯವಾಗದಂತೆ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಮಾಡಲು ಮುಂದಾಗುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ತೆರವುಗೊಳಿಸಿದ ಮನೆಯವರಿಗೆ ಪಂಚಾಯಿತಿಯಿಂದ ಸೂಕ್ತ ಜಾಗ ಕಲ್ಪಿಸಲಾಗುವುದು. ಸಂಪೂರ್ಣ ಮನೆ ತೆರವುಗೊಂಡವರಿಗೆ ಗುತ್ತಿಗೆದಾರರ ಅಗತ್ಯ ಮನೆ ಸಾಮಗ್ರಿ ನೀಡಲಿದ್ದು, ಪಂಚಾಯಿತಿಯವರು ನೀಡುವ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಉಳಿದವರಿಗೂ ಅನುಕೂಲ ಮಾಡಿಕೊಡಲಾಗುವುದು” ಎಂದು ಭರವಸೆ ನೀಡಿದ ಅವರು, ನಾಳೆಯಿಂದಲೇ ಮುಖ್ಯರಸ್ತೆ ಕಾಮಗಾರಿ ಆರಂಭಿಸಲಾಗುತ್ತಿದೆ. ತಾವು ಸಹಕಾರ ನೀಡಬೇಕೆಂದು ಕೋರಿದರು.
ತಾಪಂ ಇಒ ಪ್ರಕಾಶ್ ಮಾತನಾಡಿ, “ಕುದುರೆ ಸಾಲವಾಡಗಿಯ ಸರ್ಕಾರಿ ಜಾಗದಲ್ಲಿ ನಿರಾಶ್ರಿತರಿಗೆ ಅಗತ್ಯವಿರುವ ಜಾಗ ಕೊಡಲಾಗುವುದು. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ಧರಣಿ ನೇತೃತ್ವ ವಹಿಸಿದ್ದ ಮುಖಂಡ ಅಶೋಕ ಗೌಡ ಪಾಟೀಲ ಮಾತನಾಡಿ, “ಅಧಿಕಾರಿಗಳು ಬಡಜನರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡರುವುದು ಸ್ವಾಗತಾರ್ಹ. ಯಾವುದೇ ಕಾರಣಕ್ಕೂ ಬಡವರಿಗೆ ಮೋಸವಾಗಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕ್ರಮ, ನೀತಿಗಳ ವಿರುದ್ಧ ಹೋರಾಟ ತೀವ್ರಗೊಳ್ಳಬೇಕು: ಸಿಐಟಿಯು ಕೆ ಹೇಮಲತಾ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಹಳ್ಳಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಲೋಕೋಪಯೋಗಿ ಇಲಾಖೆ ಎಇಇ ಎಸ್‌ಜಿ ದೊಡ್ಡಮನಿ, ತಹಶೀಲ್ದಾರ್ ವೈ ಎಸ್ ಸೋಮನಕಟ್ಟಿ, ಡಾ. ಹಸನ್ ಢವಳಗಿ, ಬಾಬು ನದಾಫ್, ಕಾಮೇಶ್ ಭಜಂತ್ರಿ, ಗುರುರಾಜ ಗುಡಿಮನಿ, ಯಮನೂರಿ ಚಲವಾದಿ, ನಜೀರ ಪಾಟೀಲ ಗುಡ್ನಾಳ, ಅರವಿಂದ ಸಜ್ಜನ, ಶಾಂತಗೌಡ ಪಾಟೀಲ, ರಮಜಾನ ಮಜಾವರ, ಬಾಳ ಸಾಹೇಬಗೌಡ ಪಾಟೀಲ, ಬಸವರಾಜ ದೇಸಾಯಿ, ಶ್ರೀಕಾಂತ ರೆಡ್ಡಿ, ದಾವಲಸಾಬ ಅತ್ತರ, ಶರಣಪ್ಪ ನಾಯ್ಕೋಡಿ, ಹನುಮಂತ ಲಗಳಿ, ಅಲ್ತಾಫ್ ಅತ್ತರ, ಶ್ರೀಕಾಂತ ಅಡಚದ, ಪರಸಪ್ಪ ಕಳ್ಳಿಮನಿ, ಮುತ್ತುರಾಜ ಹಾಲಿಹಾಳ, ಶೇಕಿನ ಎಲಿಗಾರ, ಪಾವಡಪ್ಪ ಇಂಗಳಗಿ, ಕಮಲವ್ವ ಕಳ್ಳಿಮನಿ, ಬಸ್ಸಮ್ಮ ತಮದಡ್ಡಿ ದಾವಲಬಿ ಎಲೆಗಾರ ಸೇರಿದಂತೆ ಇತರರು ಇದ್ದರು.





