ವಿಜಯಪುರ ಜಿಲ್ಲೆಯ ಚಡಚಣದ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕಿನ ದೈನಂದಿನ ವಹಿವಾಟು ಮುಗಿಸಿ, ಬಂದ್ ಮಾಡುವ ವೇಳೆ ನುಗ್ಗಿದ ಮುಸುಕುಧಾರಿಗಳ ತಂಡವು ಈ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ.
ದರೋಡೆಕೋರರು 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನವನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಿಸ್ತೂಲ್, ಮಾರಕಾಸ್ತ್ರಗಳೊಂದಿಗೆ ಬಂದಿದ್ದ 5ಕ್ಕೂ ಹೆಚ್ಚು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ.
ಬ್ಯಾಂಕ್ನ ಮ್ಯಾನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ ನಡೆಸಿದ್ದಾರೆ.
ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪೊಲೀಸರು ಮಹಾರಾಷ್ಟ್ರವನ್ನು ಸಂಪರ್ಕಿಸುವ ರಸ್ತೆಗಳಿಗೆ ನಾಕಾ ಬಂಧಿ ಹಾಕಿದ್ದಾರೆ. ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಆ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಪೊಲೀಸರು ಬ್ಯಾಂಕ್ನಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲಿಸಿದ್ದಾರೆ. 8 ಕೋಟಿ ನಗದು, ಸುಮಾರು 50 ಕೆ.ಜಿಗೂ ಹೆಚ್ಚು ಚಿನ್ನ ದರೋಡೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದಾಗಿ ಎಸ್ಬಿಐ ಬ್ಯಾಂಕ್ ನಲ್ಲಿ ಚಿನ್ನಾಭರಣವನ್ನು ಇಟ್ಟ ಗ್ರಾಹಕರಲ್ಲಿ ಆತಂಕ ಮನೆಮಾಡಿದೆ.
ಹಣ ಮತ್ತು ಚಿನ್ನ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಹಕರು ಮಂಗಳವಾರ ರಾತ್ರಿಯವರೆಗೂ ಎಸ್ಬಿಐ ಬ್ಯಾಂಕ್ ಎದುರು ಜಮಾವಣೆಯಾಗಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಪರದಾಡಬೇಕಾಯಿತು. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಐದಕ್ಕೂ ಅಧಿಕ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿದೆ. ಬ್ಯಾಂಕ್ ಆಧಿಕಾರಿಗಳು ನಿಖರವಾಗಿ ಮಾಹಿತಿ ನೀಡಿದ ಬಳಿಕವಷ್ಟೇ ದರೋಡೆಯಾದ ನಗದು ಹಾಗೂ ಚಿನ್ನಾಭರಣ ಮಾಹಿತಿ ಲಭ್ಯವಾಗಲಿದೆ. ಬ್ಯಾಂಕಿನಲ್ಲಿದ್ದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದ ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಈ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳನ್ನು ಕರೆಸಲು ಸೂಚಿಸಲಾಗಿದೆ.
ಚಡಚಣ ಪಟ್ಟಣದ ಎಸ್ ಬಿಐ ಬ್ಯಾಂಕ್ ದರೋಡೆಕೋರರು ಮಹಾರಾಷ್ಟ್ರದತ್ತ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಚಡಚಣ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಗ್ರಾಮದ ಮಾರ್ಗವಾಗಿ ಹೋಗಿರುವ ದರೋಡೆಕೋರರ ಗುಂಪು ಚದುರಿಕೊಂಡು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಹುಲಿಜಂತಿ ಗ್ರಾಮದ ಬಳಿ ದರೋಡೆಕೋರರು ಪ್ರಯಾಣ ಮಾಡುತ್ತಿದ್ದ ಕಾರು ಕುರಿಗಳಿಗೆ ಡಿಕ್ಕಿಯಾಗಿದೆ. ಕುರಿಗಳಿಗೆ ಡಿಕ್ಕಿಯಾದದ್ದನ್ನ ಪ್ರಶ್ನಿಸಿದ ಗ್ರಾಮಸ್ಥರಿಗೆ ಕಾರಿನಲ್ಲಿದ್ದ ಓರ್ವ ದರೋಡೆಕೋರ ಕೈಯಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿ ಪರಾರಿಯಾಗಿರುವುದು ತಿಳಿದುಬಂದಿದೆ.
KA 24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಓರ್ವ ದರೋಡೆಕೋರನ ಕಾರಿನಲ್ಲಿ ಅಲ್ಪಸ್ವಲ್ಪ ಚಿನ್ನಾಭರಣ ಬಿದ್ದಿತ್ತು. ಇನ್ನುಳಿದ ದರೋಡೆಕೋರರು ಪ್ರತ್ಯೇಕವಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಬ್ಯಾಂಕ್ನಲ್ಲಿ ದರೋಡೆ ನಡೆದ ಸ್ಥಳಕ್ಕೆ ಶ್ವಾನದಳ ಬೆರಳಚ್ಚುದಳ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸಿದ್ದಾರೆ.
ಈ ಘಟನೆಯ ಕುರಿತು ಸಕಲ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದೇವೆ. ತನಿಖೆ ಚುರುಕುಗೊಳಿಸಿದ್ದೇವೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ, ಸದ್ಯ ಎಷ್ಟು ಪ್ರಮಾಣದ ನಗದು ಚಿನ್ನ ಕಳ್ಳತನವಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಹಳೆಯ ಬ್ಯಾಂಕ್ ಉದ್ಯೋಗಿ ಸಹಿತ ಹಲವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಕೆನರಾ ಬ್ಯಾಂಕ್ ಪ್ರಕರಣ ಮಾಸುವ ಮುನ್ನವೇ ವಿಜಯಪುರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ದರೋಡೆ ನಡೆದು ಹೋಗಿದೆ. ಸಾರ್ವಜನಿಕರು ಸೇರಿದಂತೆ ಬ್ಯಾಂಕಿನ ಗ್ರಾಹಕರು ಆತಂಕಿತರಾಗಿದ್ದಾರೆ.





