ಗ್ರಾಮೀಣ ಪ್ರದೇಶಗಳಲ್ಲಿ ಹೊಸ ವ್ಯೆದ್ಯರು ಕಾರ್ಯ ನಿರ್ವಹಿಸಲೇಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ, ಜಿಲ್ಲೆಯಲ್ಲಿ ಪ್ರತಿ ವರ್ಷ 200 ವ್ಯೆದ್ಯರು ಕೋರ್ಸ್ ಮುಗಿಸಿ ಬಂದರೂ ಜಿಲ್ಲೆಯಲ್ಲಿ ಗ್ರಾಮೀಣ ಸೇವೆಗೆ ಏಕೆ ಬರುತ್ತಿಲ್ಲ? ಈ ಕುರಿತು ಕಾರಣ ಸಹಿತ ದಾಖಲೆ ಕೊಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ 2025-26ನೇ ವಾರ್ಷಿಕ ಕರಡು ಯೋಜನೆ ರೂಪಿಸಲು ಅಖಂಡ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ವಿಜಯಪುರ ಜಿಲ್ಲೆಯಲ್ಲಿ 2 ಎಂಬಿಬಿಎಸ್ ಕಾಲೇಜುಗಳಿವೆ. ಪ್ರತಿ ವರ್ಷ 200 ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಆಚೆ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬ ವೈದ್ಯರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದರೆ ವೈದ್ಯರ ಕೊರತೆ ಇರುವುದಿಲ್ಲ. ಆದರೂ ಜಿಲ್ಲೆಯಲ್ಲಿ ವೈದ್ಯರ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಬಗ್ಗೆ ಲಿಖಿತ ಮಾಹಿತಿ ಒದಗಿಸಬೇಕು” ಎಂದು ತಿಳಿಸಿದರು.

“ತಾಲೂಕಿನಲ್ಲಿ 48 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಸದ್ಯ ಬೆಳೆಹಾನಿಯ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ನಷ್ಟ ಅನುಭವಿಸುತ್ತಿರುವ ಪ್ರತಿ ರೈತರಿಗೂ ಆದ್ಯತೆಯ ಮೇರೆಗೆ ವಿಮೆ ಜಮಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ವಿಜಯಪುರ | ಶಾಸಕರಿಗೆ ದೆಹಲಿ ಹೋಗುವ ಅಧಿಕಾರವಿದೆ: ಸಚಿವ ಎಂ ಬಿ ಪಾಟೀಲ
ಮಸೂತಿ, ಮಲಘಾಣ, ಮುಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಟ್ಟಡದ ರಿಪೇರಿಗೆ ಅನುದಾನ ಒದಗಿಸುವಂತೆ ಪಿಡಿಒಗಳಿಗೆ ಸೂಚಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ಬದ್ರುದ್ದೀನ, ಸವದಗರ, ಬಬಾಗೇವಾಡಿ ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ, ಕೊಲ್ಹಾರ ಹಾಗೂ ನಿಡಗುಂದಿ ತಹಶೀಲ್ದಾರ, ಬಸವನಬಾಗೇಡಿ ತಾಪಂ ಇಒ ಪ್ರಕಾಶ ದೇಸಾಯಿ, ನಿಡಗುಂದಿ ಇಒ ವೆಂಕಟೇಶ ವಂದಾಲ, ಕೊಲ್ಹಾರ ಇಒ ಸುನೀಲ್ ಮದ್ದಿನ, ಕೊಲ್ಹಾರ ಪ ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ, ನಿಡಗುಂದಿ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಇದ್ದರು.





