ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಗಳೂರಿನ ಸೇಂಟ್ ಜೋಸೆಫ್ ಮ್ಯಾನೇಜ್ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿ ಬೆಂಬಲ ಸೂಚಿಸಿದ್ದಾರೆ.
ವಿದ್ಯಾರ್ಥಿನಿ ದನಿಯಾ, ಶೆರ್ವಿನ್, ಅಪ್ಸಾ, ರಾಜೇಶ್ವರಿ, ಯತೀಶ್, ರತ್ನಪ್ರೀಯ, ಆಲನ್, ಆಕಾಂಕ್ಷ, ಕಿಶೋರ್, ಶರೀನಾ, ಆದಿ, ಅಂಜಲಿ, ನೀಲಕಂಠ, ಶಿವಾನಿ, ಕ್ಯಾಲ್ವಿನ್, ಮಣಿ, ಮಾತನಾಡಿ “ನಾವು ಹಿಂದುಳಿದ ಜಿಲ್ಲೆಗಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನಕ್ಕೋಸ್ಕರ ನಾಲ್ಕುದಿನ ವಿಜಯಪುರಕ್ಕೆ ಬಂದಿದ್ದೇವೆ. ಇದೇ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಯುತ್ತಿರುವುದು ತಿಳಿದು ಈ ಹೋರಾಟವನ್ನು ಬೆಂಬಲಿಸಲು ಬಂದಿದ್ದೇವೆ” ಎಂದು ಹೇಳಿದರು.
“ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಸರ್ಕಾರ ಗಮನ ಕೊಡಬೇಕು. ಇಲ್ಲಿನ ಶಾಸಕರುಗಳು ನಾಗರಿಕರ ಅವಶ್ಯಕತೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕು. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಯಲ್ಲಿ ಮತ ಕೇಳುವುದು ಮತ್ತು ಹಾಕುವುದು ಅಲ್ಲ; ಬದಲಾಗಿ ಜನರ ಬದುಕನ್ನು ಜಾತಿ ಧರ್ಮಗಳಾಚೆ ಉತ್ತಮಗೊಳಿಸುವುದು ಎಂದು. ಬಡ ವಿದ್ಯಾರ್ಥಿಗಳಲ್ಲಿ ಎಷ್ಟೇ ಪ್ರತಿಭಾವಂತರಿದ್ದರೂ ಅತಿಯಾದ ಶುಲ್ಕ ಮತ್ತು ಡೊನೇಷನ್ನಿಂದಾಗಿ ಉನ್ನತ ಶಿಕ್ಷಣ ಮುಂದೆವರೆಸಲು ಆಗುತ್ತಿಲ್ಲ. ಸರ್ಕಾರಿ ಕಾಲೇಜುಗಳಿದ್ದರೆ ಬಡವರಿಗೆ ಶಿಕ್ಷಣ ತಲುಪುತ್ತದೆ” ಎಂದರು.
ಇದನ್ನೂ ಓದಿ: ವಿಜಯಪುರ | ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳ ಭರವಸೆ: ಧರಣಿ ಹಿಂಪಡೆದ ನಿರಾಶ್ರಿತರು
“ಶಿಕ್ಷಣ ಖಾಸಗಿ ಕಂಪನಿಗಳಿಗೆ ವಹಿಸಬಾರದು ಅದು ಸರ್ಕಾರದ ಕೈಯಲ್ಲೇ ಇರಬೇಕು. ಜನತೆ ತಮ್ಮ ಹಕ್ಕಗಳಿಗೆ ಯಾವತ್ತು ಹೋರಾಡಬೇಕು . ನ್ಯಾಯ ಸಿಗುವವರೆಗೂ ಹೋರಾಟಮಾಡಬೇಕು ಎಂದರು. ಶ್ರೀಮಂತರಿಗೊಂದು ಬಡವರಿಗೊಂದು ತರಹದ ಆರೋಗ್ಯ ಮತ್ತು ಶಿಕ್ಷಣ ಇರಬಾರದು ಅದು ಎಲ್ಲರಿಗೂ ಒಂದೇ ತರಹದ ಸಮಾನವಾದ ಶಿಕ್ಷಣ ಬೇಕಾಗಿದೆ. ಹಿಂದುಳಿದ ಜಿಲ್ಲೆಗಳಿಗೆ ಸರ್ಕಾರ ಮೊದಲ ಅದ್ಯತೆ ಕೊಡಬೇಕು. ನಂತರ ಮುಂದೆವರೆದ ಜಿಲ್ಲೆಗಳ ಕಡೆಗೆ ಗಮನ ಹರಿಸಬೇಕು ಆದರೆ ಸರ್ಕಾರಗಳು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ವಿಫಲವಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.





