ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಅತಿಥಿ ಉಪನ್ಯಾಕರ ನೇಮಕಾತಿ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಎಐಡಿಎಸ್‌ಒ ತೀವ್ರವಾಗಿ ಖಂಡಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಸೇರಿ ಹೋರಾಟ ನಡೆಸಿದ್ದರು. ಇದೀಗ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಸ್ತು ಎಂದಿದ್ದು, ಕ್ರಮ ಕೈಗೊಂಡಿದೆ.
ಅತಿಥಿ ಉಪನ್ಯಾಸಕರಿಲ್ಲದೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ತರಗತಿಗಳನ್ನೇ ನಡೆಸದೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಕೂಡ ಘೋಷಿಸಿವೆ. ಇನ್ನೊಂದೆಡೆ, ಖಾಸಗಿ ಕಾಲೇಜುಗಳಲ್ಲಿ ಸರಾಗವಾಗಿ ಪಾಠಗಳು ನಡೆದು ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ರಾಜ್ಯದ ಬಡ ವಿದ್ಯಾರ್ಥಿಗಳಿಗಾದ ಈ ಘೋರ ಅನ್ಯಾಯವನ್ನು ಖಂಡಿಸಿಕ ಎಐಡಿಎಸ್ಒ ನೇತೃತ್ವದಲ್ಲಿ ರಾಜ್ಯದ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಸೆಪ್ಟೆಂಬರ್ 27ರಂದು ರಾಜ್ಯವ್ಯಾಪಿ ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿದ್ದಾರೆ. ಈಶ್ವರ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯವರ ಆದರ್ಶಗಳಿಂದ ಪ್ರೇರಿತರಾಗಿ ತಮ್ಮ ಶಿಕ್ಷಣದ ಹಕ್ಕನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕಿಂದು ಜಯ ದೊರೆತಿದೆ. ಅಂತಿಮವಾಗಿ, ಕರ್ನಾಟಕ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ನೇಮಕಾತಿಗೆ ಮುಂದಾಗಿದೆ!! ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸಿದ ಸರ್ಕಾರದ ನಡೆಯನ್ನು ಎಐಡಿಎಸ್ಓ ಸ್ವಾಗತಿಸುತ್ತದೆ. ಆದರೆ, ಪ್ರತಿ ವಿಷಯಕ್ಕೆ ಕನಿಷ್ಠ 30 ಗಂಟೆ ಪಾಠ ನಡೆಸಿದ ನಂತರವಷ್ಟೇ ಪರೀಕ್ಷೆಗಳನ್ನು ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರೀಯ ಪ್ರಶಸ್ತಿ
ಹೋರಾಟದಿಂದ ಮಾತ್ರವೇ ಬದಲಾವಣೆ ಸಾಧ್ಯ ಎಂಬ ಸಂದೇಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಈ ಮೂಲಕ ಎಲ್ಲೆಡೆ ಸಾರಿದ್ದಾರೆ. ಹೋರಾಟದ ಭಾಗವಾದ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಎಐಡಿಎಸ್ಓ ಜಿಲ್ಲಾ ಸಮಿತಿ ಸಮಿತಿಯ ಕ್ರಾಂತಿಕಾರಿ ಅಭಿನಂದನೆಗಳು ತಿಳಿಸುತ್ತದೆ ಎಂದು ಕಾರ್ಯದರ್ಶಿ ಕಾವೇರಿ ರಜಪೊತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.





