ಸಾರ್ವಜನಿಕ-ಖಾಸಗಿ ಪಾಲುದಾರಿಕೆ(ಪಿಪಿಪಿ) ಮಾದರಿಯೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಹೆಸರಿನಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ಯತ್ನ ಖಂಡನೀಯವಾಗಿದೆ. ಪಿಪಿಪಿ ಮಾದರಿಯ ಒಡಂಬಡಿಕೆಗಳು ಹೊಸದಾಗಿಲ್ಲ. ಇವುಗಳು ಎಲ್ಲೆಡೆ ವಿಫಲವಾಗಿದ್ದು, ಬಡವರು ಮತ್ತು ಶೋಷಿತ ಸಮುದಾಯಗಳಿಗೆ ಮಾರಕವಾಗಿರುವುದು ಜನರ ಅನುಭವ ಮತ್ತು ಸರ್ಕಾರದ ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಕರ್ನಾಟಕ ಜನಾರೋಗ್ಯ ಚಳವಳಿಯ ಟೀನಾ ಝೇವಿಯರ್ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ಜಿಲ್ಲಾ ಆಸ್ಪತ್ರೆಯನ್ನು ಉಳಿಸಿ ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ದೇವರಹಿಪ್ಪರಗಿಯಲ್ಲಿ ನಡೆದ ಶಕ್ತಿಶಾಲಿ ಪ್ರತಿಭಟನೆಯಲ್ಲಿ ಮಾತನಾಡಿದರು. ಬಳಿಕ ಪ್ರತಿಭಟನಾ ಜಾಥಾ ಮೋರೆ ಹನುಮಂತರಾಯ ವೃತ್ತದಿಂದ ಆರಂಭಿಸಿ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
“ಪಿಪಿಪಿ ಮಾದರಿ ಜನಸಾಮಾನ್ಯರಿಗೆ ಮಾರಕವಾಗಿರುವ ಪುರಾವೆಗಳ ನಡುವೆಯೂ ಸರ್ಕಾರವು ಮತ್ತೆ ಅದೇ ಮಾದರಿಯನ್ನು ಜನರ ಮೇಲೆ ಹೇರುವ ಪ್ರಯತ್ನ ಮಾಡುತ್ತಿರುವುದು ಜನರ ವಿಶ್ವಾಸಕ್ಕೆ ದ್ರೋಹವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕಾಶ್ ಗುಡಿಮನಿ, ಶ್ರೀನಾಥ ಪೂಜಾರಿ, ಅಕ್ರಮ್ ಮಸಾಲ್ಕರ್, ರೇಣುಕಾ ಪಾಟೀಲ ರೈತ ಸಂಘ, ರಾವುತ್ ತಳಕೇರಿ ರಾಜ್ಯ ಡಿಎಸ್‌ಎಸ್ ಸಂಚಾಲಕರು ಮಾತನಾಡಿ, “ವೈದ್ಯಕೀಯ ಕಾಲೇಜಿನಲ್ಲಿ ವಿಧಿಸಲಾಗುವ ಶುಲ್ಕದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದರಿಂದಾಗಿ ಖಾಸಗಿ ಸಂಸ್ಥೆಗಳು ಇತರ ಖಾಸಗಿ ಕಾಲೇಜುಗಳಂತೆ ತಮಗೆ ತೋಚಿದಂತೆ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಇದರಿಂದ ಬಡವರು ಮತ್ತು ಶೋಷಿತ ಸಮುದಾಯಗಳಿಗೆ ವೈದ್ಯಕೀಯ ಶಿಕ್ಷಣ ಕೈಗೆಟುಕದಂತಾಗುತ್ತದೆ. ಈಗಾಗಲೇ ವೈದ್ಯ ವೃತ್ತಿಯಲ್ಲಿ ಬಡ ಶೋಷಿತ ಸಮುದಾಯಗಳ ಪ್ರತಿನಿಧಿತ್ವ ಅತ್ಯಲ್ಪವಾಗಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಕಡಿಮೆಯಾಗುವ ಅಪಾಯವಿದೆ” ಎಂದರು.
“ಅಪಾಯಕಾರಿ ನೀತಿಗಳನ್ನು ತಾಕದ ಜನತೆ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದು, ಈಗ ಮತ್ತೊಮ್ಮೆ ಕರ್ನಾಟಕದ ಪ್ರಜ್ಞಾವಂತ ನಾಗರಿಕರು ಈ ದುರ್ನೀತಿಯ ವಿರುದ್ಧ ಎದ್ದು ನಿಲ್ಲುತ್ತಿದ್ದಾರೆ. PPP ಮಾದರಿಯ ವೈದ್ಯಕೀಯ ಕಾಲೇಜು ಯೋಜನೆಯು ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿ ಕೈಗಳಿಗೆ ಒಪ್ಪಿಸುವ ಅಪಾಯವನ್ನು ಹೊಂದಿದ್ದು, ಇದು ಸಾರ್ವಜನಿಕ ಪ್ರವೇಶ, ಪಾರದರ್ಶಕತೆ, ಆರೋಗ್ಯ ಸೇವೆಗಳ ಲಭ್ಯತೆ ಮತ್ತು ವೆಚ್ಚದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಮಾದರಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುತ್ತದೆ. ಈ ಖಾಸಗೀಕರಣ ಅಗತ್ಯ ಸೇವೆಗಳಿಗೆ ಕುತ್ತು ತರುತ್ತದೆ. ಇದರಿಂದಾಗಿ ಸಾಮಾನ್ಯ ಕುಟುಂಬಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ವೆಚ್ಚ ದುಬಾರಿಯಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮೂರು ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಅನುಮತಿ
“ಸರ್ಕಾರವು PPP ಮಾದರಿಯಿಂದ ಹಿಂದೆ ಸರಿದು, ಸಾರ್ವಜನಿಕ ಹೂಡಿಕೆಯನ್ನು ಬಲಪಡಿಸಿ, ಎಲ್ಲರಿಗೂ ಸಮಾನ, ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣವನ್ನು ಖಚಿತಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಹೋರಾಟವನ್ನು ದೇವರಹಿಪ್ಪರಗಿಯ ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿʼ ಮುಖ್ಯಸ್ಥರುಗಳಾದ ಪ್ರಕಾಶ್ ಗುಡಿಮನಿ, ಹೃದಯ ಮೇರಿ, ರಾವುರ್ ತಳಕೇರಿ, ಲಕ್ಕಿ ಕಮ ಇಂಚಿಗೇರಿ, ಸಾವಿತ್ರಿ ಕಂಬಾರ, ಶಾಂತ ದಿಗಿನಾಳ ಹಾಗೂ ಅಲ್ಲಬಕ್ಷ ಇಬ್ರಾಹಿಂ ಮರೋಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, 200ಕ್ಕೂ ಹೆಚ್ಚು ನಾಗರಿಕರು-ಮುಖ್ಯವಾಗಿ ಮಹಿಳೆಯರು, ವಿದ್ಯಾರ್ಥಿಗಳು, ರೈತರು ಮತ್ತು ಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಿದ್ದರು.





