ಪ್ರತಿ ಮಗುವಿನ ಹಕ್ಕುಗಳನ್ನು ಎತ್ತಿ ಹಿಡಿಯಲು ಮಕ್ಕಳ ಹಕ್ಕುಗಳ ಆಯೋಗವು ಶ್ರಮಿಸುತ್ತದೆ. ಮಕ್ಕಳನ್ನು ಮಾನಸಿಕ, ದೈಹಿಕ ಹಿಂಸೆ, ಶೋಷಣೆ ಮತ್ತು ನಿರ್ಲಕ್ಷದಿಂದ ಕಾಣದೆ, ಪ್ರತಿ ಮಗುವಿನ ಹಕ್ಕನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ವಿಜಯಪುರದ ಮಕ್ಕಳ ಸಹಾಯವಾಣಿ ಆಪ್ತಸಮಾಲೋಚಕಿ ನೀಲಮ್ಮ ಅರಳಗುಂಡಗಿ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊರವಲಯದ ಲೊಯೋಲ ಶಾಲೆಯಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ “ಚಿಣ್ಣರ ಮೇಳ” ಹಾಗೂ ಮಕ್ಕಳ ಸಂಭ್ರಮದ ಹಬ್ಬದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, “ಎಂತಹ ಸಂದರ್ಭದಲ್ಲಿಯಾದರೂ, ಸಮಾಜದಲ್ಲೇ ಆಗಲಿ, ಕುಟುಂಬದಲ್ಲೇ ಆಗಲಿ ಮಕ್ಕಳನ್ನು ಶೋಷಿಸುವುದು ಕಂಡುಬಂದರೆ, ಅಥವಾ ಮಕ್ಕಳು ತೊಂದರೆಗೆ ಒಳಗಾಗಿದ್ದರೆ ಕೂಡಲೇ 1098ಕ್ಕೆ ಕರೆ ಮಾಡಿ ಇಲ್ಲವೆ ಮಕ್ಕಳ ರಕ್ಷಣಾ ಸಮಿತಿಗೆ ತಿಳಿಸಬೇಕು” ಎಂದರು.
ಮಕ್ಕಳ ಸಾಹಿತಿ ಬಸವರಾಜ ಅಗಸರ ಮಾತನಾಡಿ, “ಚಿಣ್ಣರ ಮೇಳದ ಮೂಲಕ ಮಕ್ಕಳ ಸೃಜನಶೀಲತೆ, ಪ್ರತಿಭೆ ಮತ್ತು ಕಲಿಕೆಯನ್ನು ಉತ್ತೇಜಿಸುವ ಕೆಲಸವಾಗುತ್ತದೆ. ಕಲಿಕೆ, ನೃತ್ಯ, ಆಟ ಮತ್ತು ಸಂಭ್ರಮದ ಮೂಲಕ ಹಬ್ಬದ ವಾತಾವರಣ ನಿರ್ಮಿಸಿ ಕಾರ್ಯಕ್ರಮ ಸಂಘಟಿಸಿರುವ ಸಂಗಮ ಸಂಸ್ಥೆ ಮಕ್ಕಳಿಗೆ ತಮ್ಮ ಸಾಧನಗೈಯಲು ಉತ್ತಮ ವೇದಿಕೆ ನೀಡಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಮಹಿಳೆ ಆತ್ಮರಕ್ಷಣೆ ಕಲೆ ಕಲಿಯುವುದು ಅನಿವಾರ್ಯ: ಪ್ರೊ. ನಾಮದೇವಗೌಡ
ಕಾರ್ಯಕ್ರಮದಲ್ಲಿ ರಾಂಪೂರ ಪಿ ಎ ಗ್ರಾಮದ ಶಾಲೆಯ ಮಗು ಅಶ್ವಿನಿ ರಾಠೋಡ, ಲೊಯೋಲ ಸಿ ಬಿ ಎಸ್ ಸಿ ಪ್ರಾಶುಂಪಾಲ ಫಾ.ವಿಶಾಲ್ ಡಿ ಮೆಲ್ಲೊ, ಗಣಿಹಾರ ಶಾಲೆಯ ಮಗು ಸಚೀನ ಹಿಕ್ಕನಗುತ್ತಿ, ತನು ಜಾದವ, ಸಂಗಮ ಸಂಸ್ಥೆ ಸಹ ನಿರ್ದೇಶಕ ಸಿ ಸಿಂತಿಯಾ ಡಿ ಮೆಲ್ಲೊ, ಲೊಯೋಲ ಸಿ ಬಿ ಎಸ್ ಸಿ ಫಾ. ಜೀವನ್ ಡಿಸೋಜ, ಸಂಗಮ ಸಂಸ್ಥೆ ನಿರ್ದೇಶಕ ಫಾ. ಸಂತೋಷ ವಿಲ್ಸನ್, ಫಾ. ಸುನೀಲ ಫೆರ್ನಾಂಡಿಸ್, ಪಾ. ರೊನಾಲ್ಡ್, ಪಾಯಲ್ ರಾಠೋಡ, ಶೋಭಾ ವಾಲಿಕಾರ, ರಾಜು ಕುರಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಸಂಗಮ ಸಂಸ್ಥೆ ಕಲಿಕಾ ಕೇಂದ್ರ ಮಕ್ಕಳು ವಿವಿಧ ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಹುಮಾನಗಳ ಪಡೆದುಕೊಂಡರು.





