ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೆರಳದಿನ್ನಿ ಗ್ರಾಮದಲ್ಲಿ ಶರಣಗೌಡ ವೀರಪ್ಪ ಬಿರಾದಾರ ಅವರು ಅಬಕಾರಿ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಅವರ ಜಮೀನು ಹರಾಜು ಮಾಡಲು ತಹಶೀಲ್ದಾರರ ನೇತೃತ್ವದಲ್ಲಿ ಬಂದ ಅಬಕಾರಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಾಗೂ ಕೆಲವು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿ ಹರಾಜು ಕ್ರಮವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಅಧಿಕಾರಿಗಳ ಕ್ರಮವನ್ನು ವಿರೋಧಿಸಿದ ಪ್ರತಿಭಟನಾಕಾರರು ರೈತರ ಹಿತಾಸಕ್ತಿ ಕಾಪಾಡುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹರಾಜು ಪ್ರಕ್ರಿಯೆಯನ್ನು ಪ್ರಶ್ನಿಸಿದ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮಪುರ, “ಪ್ರಕರಣ ಈಗಾಗಲೇ ಬಸವನ ಬಾಗೇವಾಡಿ ಮತ್ತು ಕಲಬುರಗಿಯ ಹೈಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಜಮೀನು ಹರಾಜು ಮಾಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಭೀಮಾ ನದಿಯ ರೌದ್ರ ರೂಪ; ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಈ ವೇಳೆ ಮಹಂತೇಶ ಹಿರೇಮಠ, ದೇವರಾಜ ಕೋಳೂರ, ಮಹೇಶ ಕೆಂಭಾವಿ, ವೆಂಕಟೇಶ ರಾವೂರ, ಪ್ರಮುಖರಾದ ಕಾಶಿರಾಯ ದೇಸಾಯಿ, ಪ್ರಮೋದ ಕೊಳಗೇರಿ, ಬಸವರಾಜ ಮಸಬಿನಾಳ, ಪುಂಡಲೀಕ ದೇಸಾಯಿ ಶ್ರೀಶೈಲಗೌಡ ಕೋನರೆಡ್ಡಿ ಇದ್ದರು. ಹರಾಜು ಪ್ರಕ್ರಿಯೆಯಲ್ಲಿ ಹರಾಜು ಮಾಡಬೇಕಾದ ಆಸ್ತಿಗೆ ನಿರೀಕ್ಷಿತ ಬೇಡಿಕೆ ಬಾರದ್ದರಿಂದ ಹರಾಜು ಮುಂದೂಡಲಾಯಿತು.





