ಈ ದೇಶ ಎಂದರೆ ಸಂವಿಧಾನ ಅಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲಾ ಎಂದು ಹಿಂದೂ ಮುಖಂಡ ಮಾತನಾಡಿದ್ದು ಖಂಡನೀಯ. ಆರ್.ಎಸ್.ಎಸ್ ಮುಖಂಡರಿಗೆ ಸಂವಿಧಾನ, ಅಂಬೇಡ್ಕರ ಮತ್ತು ರಾಷ್ಟ್ರಧ್ವಜ ಬಗ್ಗೆ ಇಷ್ಟೊಂದು ಅಗೌರವದ ಮಾತುಗಳು ಏಕೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಗರದಲ್ಲಿ ಹಿಂದೂ ಸಮಾವೇಶ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮದ ವಕ್ತಾರರಾಗಿ ಹಣಮಂತ ಮಳಲಿ ಎಂಬಾತರು ಬಂದಿದ್ದರು. ಅವರು ಆ ಕಾರ್ಯಕ್ರಮದಲ್ಲಿ ‘ಈ ದೇಶ ಎಂದರೆ ಸಂವಿಧಾನ ಅಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲಾ’ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ನೋಡಿದರೆ ಏನು ಸಂದೇಶ ಕೊಡಲು ಹೊರಟಿದ್ದಾರೆ..? ಈ ರೀತಿ ಮಾತನಾಡಿದ್ದು, ಮಹಾನ ಪುರುಷರಿಗೆ ಅವಮಾನ ಆಗುತ್ತದೆ. ರಾಷ್ಟ್ರಧ್ವಜಕ್ಕೆ ಅವಮಾನಿಸಿದಂತಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ರೀತಿಯ ಹೇಳಿಕೆ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಲು ಪ್ರಚೋದನೆ ನೀಡದಂತಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಮುಖಂಡ ಹಣಮಂತ ಮಳಲಿ ತಕ್ಷಣ ಕ್ಷಮೆ ಕೇಳಬೇಕು. ಸಂವಿಧಾನವನ್ನು ಅವಮಾನಿಸಿ ಹಿಂದೂ ಸಮಾವೇಶ ಮಾಡಲು ಅವಕಾಶ ನೀಡಬಾರದು. ಸಂವಿಧಾನ, ಅಂಬೇಡ್ಕರ, ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದರಿಂದ ಅವರು ಕೊಡಲೇ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.
ಇನ್ನೂ ದೇಶದ ಸಂವಿಧಾನ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ರಾಷ್ಟ್ರಧ್ವಜದ ಬಗ್ಗೆ ಅಗೌರವ ತೋರುತ್ತ ಹಗುರವಾಗಿ ಹೇಳಿಕೆ ನೀಡಿದವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಜೊತೆಗೆ ವಿಜಯಪುರ ಬಂದ್ ಕರೆ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಮಾದ್ಯಮಗೋಷ್ಟಿ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಚಾಲಕರಾದ ಬಾಲಾಜಿ ಕಾಂಬಳೆ, ಕೊಪ್ಪಳ ಪ್ರತಿನಿಧಿ ವಿರೇಶ ಉಪಸ್ಥಿತರಿದ್ದರು.





