ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ, ಬಸವನ ಬಾಗೇವಾಡಿ ತಾಲೂಕಿನ ನೆಗಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ AIDSO ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, “ರಾಜ್ಯದ ಗ್ರಾಮೀಣ ಭಾಗದ 40,000ಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆಗೆ ಆದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2500 ಕೋಟಿ ಸಾಲ ಪಡೆಯಲಾಗಿದೆ. ಯಾಕೆ ಇವರಿಗೆ ನಾವು ಕಟ್ಟುತ್ತಿರುವ ತೆರಿಗೆ ದುಡ್ಡು ಸಾಕಾಗುತ್ತಿಲ್ಲವಾ?” ಎಂದು ಟೀಕಿಸಿದರು.
“ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2025ರ ಅಕ್ಟೋಬರ್15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳೊಂದಿಗೆ ʼ1 ರಿಂದ 5 ಕಿಮೀ ವ್ಯಾಪ್ತಿಯ ಒಳಗಿನ ಚಿಕ್ಕ ಸರ್ಕಾರಿ ಶಾಲೆಗಳನ್ನು ಈ ಪ್ರಸ್ತಾಪಿತ ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ಸುಲಲಿತವಾಗಿ ಸಮ್ಮಿಳಿತಗೊಳಿಸುವುದುʼ. ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ಕಾರದ ಈ ಎಲ್ಲಾ ನಿರ್ದೇಶನಗಳು ಜಾರಿಯಾದಲ್ಲಿ ವಿಜಯಪುರದಲ್ಲಿ ಸಾವಿರಾರು ಶಾಲೆಗಳು ಮುಚ್ಚಲಿವೆ ಅದರಲ್ಲಿ ನೆಗಿನಾಳ ಗ್ರಾಮದ ಶಾಲೆಯೂ ಕೂಡ. ವಿಲೀನದ ಪರಿಣಾಮವಾಗಿ, ಸಮುದಾಯ ಮತ್ತು ಹಳ್ಳಿಗಳ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಇದರಿಂದ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಹತ್ತಿರದ ನೆರೆಹೊರೆಯ ಶಾಲೆಗಳಿಗೆ ಪ್ರವೇಶ ಕಷ್ಟವಾಗುತ್ತದೆ ಮತ್ತು ಪ್ರಯಾಣದ ದೂರ, ಅಸುರಕ್ಷತೆ ಹೆಚ್ಚಳದಿಂದಾಗಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಜೊತೆಗೆ, ಸರ್ಕಾರಿ ಶಾಲೆಗಳಿಗಾಗಿ ಆದಾಯ ಸಂಗ್ರಹಿಸಲು ಶಾಲೆಗಳ ಗೋಡೆಯ ಮೇಲೆ ಜಾಹೀರಾತಿಗೆ ಅವಕಾಶ ನೀಡುವ ಸರ್ಕಾರದ ನಡೆ ಸಂಪೂರ್ಣ ಖಾಸಗೀಕರಣಕ್ಕೆ ನಾಂದಿ ಹಾಡಲಿದೆ” ಎಂದರು.
SDMC ಅಧ್ಯಕ್ಷ ಮಹೆಬೂಬ ದುಂಡಸಿ ಮಾತನಾಡಿ, “ನಮ್ಮೂರಿನಲ್ಲಿ ಕಲಿಯುವ ಮಕ್ಕಳು, ಬಡವರು, ಕೂಲಿ ಕಾರ್ಮಿಕರ ಮಕ್ಕಳು. ಇವರ ಪಾಲಕರು ದಿನ ಬೆಳಗಾದರೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇವರು ಕೆಲಸದಿಂದ ಬರುವಷ್ಟರಲ್ಲಿ ಅವರ ಮಕ್ಕಳು ಅವರವರ ಮನೆಯಲ್ಲಿರುತ್ತಾರೆ. 5 ಕಿಮೀ ದೂರ ಹೋಗಬೇಕಾದರೆ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ. ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಶಾಲೆಯ SDMC ಸಮಿತಿಗೆ ಈ ಜವಾಬ್ದಾರಿ ಕೊಡುತ್ತಾರಂತೆ. ಈಗಾಗಲೇ ಹಳ್ಳಿಗಳಿಗೆ ಜನರ ಓಡಾಟಕ್ಕೇ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಇನ್ನು ಈ ಮಕ್ಕಳಿಗೆ ಬಸ್ ವ್ಯವಸ್ಥೆ ಹೇಗೆ ಮಾಡಲು ಸಾಧ್ಯ? ಯಾವುದೇ ಕಾರಣಕ್ಕೂ ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಲು ನಾವು ಬಿಡಲ್ಲ” ಎಂದರು.
ಇದನ್ನೂ ಓದಿ: ಆಲಮಟ್ಟಿ | 136 ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆ ಆರಂಭ
ಈ ಪ್ರತಿಭಟನೆಯಲ್ಲಿ (AIMSS) ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜನಿ ಎಸ್.ಬಿ ಉಪಸ್ಥಿತರಿದ್ದರು. ಹಾಗೂ ಊರಿನ 60 ಕ್ಕೂ ಹೆಚ್ಚು ಜನ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.





