ಹಣಕಾಸಿನ ವಿಷಯಕ್ಕೆ ಪತ್ನಿಯೊಂದಿಗೆ ಜಗಳವಾಡಿ ಆಕೆಯ ಹತ್ಯೆಗೈದು, ಮನೆ ಆವರಣದಲ್ಲೇ ಹೂತು ಹಾಕಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ‘ಪಟ್ಟಣದ ಸರೋಜಿನಿ ಮೇಲಿನಮನಿ (45) ಕೊಲೆಯಾದವರು. ಪತಿ, ಉದ್ಯಮಿ ಪ್ರಭು ರತ್ನಾಕರ (46) ಕೊಲೆ ಆರೋಪಿ. ಖಾರ ಕುಟ್ಟುವ ಹಾರೆಯಿಂದ ಸರೋಜಿನಿ ಅವರ ಕೊಲೆ ಮಾಡಿ, ಮನೆ ಆವರಣದಲ್ಲಿ ಗುಂಡಿ ತೋಡಿ ಮೃತದೇಹವನ್ನು ಹೂತು ಹಾಕಿದ್ದ.
ನಂತರ ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಿದ್ದ. ಫೆಬ್ರವರಿ 17ರಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೃತ್ಯವೆಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸರೋಜಿನಿಯವರ ತಾಯಿ ದೇವರಹಿಪ್ಪರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.





