ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವದೊಂದಿಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯಲ್ಲಿ ಇಂಡಿ ತಾಲೂಕಿನ ಒಡಲ ಧ್ವನಿ ಮಹಿಳಾ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
“ಮಹಿಳೆಯರು ಕೇವಲ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಲ್ಲದೆ, ಅದರಿಂದ ಉತ್ತಮ ಆದಾಯ ಗಳಿಸುವತ್ತ ಗಮನಹರಿಸಬೇಕು” ಎಂದು ಸಲಹೆ ನೀಡಿದರು.
ಒಕ್ಕೂಟದ ಸಂಸ್ಥಾಪಕಿ ಹಾಗೂ ಹೋರಾಟಗಾರ್ತಿ ಡಾ. ಭುವನೇಶ್ವರಿ ಕಾಂಬಳೆ ಪ್ರಾಸ್ತವಿಕವಾಗಿ ಮಾತನಾಡಿ, ಸಂಘಟನೆಯ ಉದ್ದೇಶ ಮತ್ತು ಮಹಿಳೆಯರ ಹಕ್ಕುಗಳ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಡಾ. ವೀಣಾ ಚಂದಾವರಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಅರ್ಥಪೂರ್ಣವಾಗಿ ಉದ್ಘಾಟಿಸಿದರು. ಸಮಾಜಿಕ ಕಾರ್ಯಕರ್ತೆ ಹಾಗೂ ಒಕ್ಕೂಟದ ಅಧ್ಯಕ್ಷರಾದ ಇಂದಿರಾಗಾಂಧಿ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಅನುದಾನ ಹೆಚ್ಚಿಸಲು ಆಗ್ರಹ
ಕೃಷಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಒಕ್ಕೂಟದ ಏಳು ಮಹಿಳೆಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಸವಿತಾ ಹೊಸಮನಿ ಅವರು ಕ್ರಾಂತಿಕಾರಿ ಹೋರಾಟದ ಹಾಡುಗಳನ್ನು ಹಾಡಿ ಸ್ಫೂರ್ತಿ ತುಂಬಿದರು. ಕಾರ್ಯಕ್ರಮದಲ್ಲಿ ಸಾವಳಸಂಗದ ಅಂಗನವಾಡಿ ಕಾರ್ಯಕರ್ತೆ ಪಾರವ್ವ ಗೌರವ ಉಪಸ್ಥಿತರಿದ್ದರು. ಜ್ಯೋತಿ ಹೊಸಮನಿ ಸ್ವಾಗತಿಸಿದರು, ಲಕ್ಷ್ಮೀ ಹಾಲಕವಡೆ ಕಾರ್ಯಕ್ರಮ ನಿರೂಪಿಸಿದರು ಮತ್ತು ಸತ್ತೇವ್ವ ದೊಡ್ಡಮನಿ ವಂದನಾರ್ಪಣೆ ಮಾಡಿದರು. ಸುನೀಲ ಹೊಸಮನಿ, ಅಶ್ವಿನಿ ಸೇರಿದಂತೆ ಹಲವಾರು ಪ್ರಮುಖರು ಇದ್ದರು.





