ಪುಸ್ತಕ ಓದುವ ಸಂಸ್ಕೃತಿಯು ಅವನತಿಯೆಡೆಗೆ ಸಾಗುತ್ತಿರುವ ಈ ಕಾಲದಲ್ಲಿ ಅದನ್ನು ಪೋಷಿಸುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಬೆಂಗಳೂರಿನ ಪ್ರಕಾಶಕ ಕಂಬತ್ತಳ್ಳಿ ಹೇಳಿದರು.
ಅವರು ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ಹಾಗೂ ಸಿಂದಗಿಯ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌ಜಿಪಿಯು ಕಾಲೇಜಿನಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳ ಸ್ಮರಣೆಗಾಗಿ ಹಮ್ಮಿಕೊಂಡಿದ್ದ 25 ಪುಸ್ತಕಗಳ ಬಿಡುಗಡೆ ಮತ್ತು ಬೆರಗು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದರು.
ಪ್ರಕಾಶಕರಿಗೆ ಕಳೆದ ನಾಲ್ಕು ವರ್ಷಗಳಿಂದ ಸರಕಾರ ಪುಸ್ತಕ ಖರೀದಿಯ ಭಾಗ್ಯ ನೀಡಿಲ್ಲ. 2021ರ ಪುಸ್ತಕ ಖರೀದಿಸಿ ಹಣವನ್ನು ಪಾವತಿಸಿಲ್ಲ. ಹೀಗಾದರೆ ಕನ್ನಡದ ಪುಸ್ತಕೂಡವಾ ಮತ್ತು ಸಾಂಸ್ಕೃತಿಕ ಜಗತ್ತು ಅಳಿವಿನಂಚಿಗೆ ಬರಲಿದೆ ಎಂದರು.
ಕಾರ್ಯಾಕ್ರಮವನ್ನು ಉದ್ಘಾಟಿಸಿ ಪ್ರೊ.ಅರವಿಂದ ಮನಗೂಳಿ ಮಾತನಾಡಿ, ಬೆರಗು ಸಂಸ್ಥೆ ಈ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಪುಸ್ತಕ ಪ್ರಕಟಿಸುವ ಮೂಲಕ ಹೊಸಬರಿಗೂ ಆದ್ಯತೆ ನೀಡುತ್ತಿದೆ ಎಂದರು.
ಇದನ್ನೂ ಓದಿ: ವಿಜಯಪುರ | ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಗೌಡಪ್ಪ ಬಡಿಗೇರ ಮನವಿ
ಗುಲಬರ್ಗಾ ವಿಶ್ವವಿದ್ಯಾಲಯಾದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್ ಟಿ ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ಪುಸ್ತಕಗಳನ್ನು ಪರಿಚಯಿಸಿದರು, ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ, ಪ್ರಾಚಾರ್ಯ ಎ ಆರ್ ಹೆಣ್ಣನದೊಡ್ಡಿ, ಪ್ರಾಚಾರ್ಯ ಡಾ. ಎಸ್ ಎಸ್ ಹಳೆಮನಿ ಉಪಸ್ಥಿತರಿದ್ದರು.
ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ 25 ಪುಸ್ತಕಗಳನ್ನು ಬಿಡುಗಡೆ ಮಾಡಿದರು.





