ಹೈದರಾಬಾದ್ ಕರ್ನಾಟಕಕ್ಕೆ ಅಂಟಿಕೊಂಡಿರುವ ತಾಲೂಕುಗಳನ್ನೊಳಗೊಂಡ ವಿಜಯಪುರ ಜಿಲ್ಲೆ ಮರು ಅಸ್ತಿತ್ವ ಪಡೆದುಕೊಂಡಿತ್ತಾದರೂ ಆರ್ಟಿಕಲ್ 371(ಜೆ) ಅಡಿ ಸಿಗುವ ವಿಶೇಷ ಸ್ಥಾನಮಾನದಿಂದಲೂ ವಂಚಿತವಾಯಿತು. ಆದರೆ ಕನಿಷ್ಠ ಪಕ್ಷ ಈ ಜಿಲ್ಲೆಯ ಅಭಿವೃದ್ಧಿಗೆ ಅವಶ್ಯಕ ಅನುದಾನವನ್ನು ನೀಡಿ ಮೇಲಕ್ಕೆತ್ತುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.
ವಿಜಯಪುರ ಜಿಲ್ಲೆ ಈ ಹಿಂದೆ ಪಂಚನದಿಗಳ ಬೀಡು, ದಕ್ಷಿಣ ಭಾರತದ ಪಂಜಾಬ್ ಎಂದೆಲ್ಲ ಕರೆಸಿಕೊಳ್ಳುತ್ತಿತ್ತಾದರೂ ಇಲ್ಲಿ ಬರಗಾಲದ ಹಣೆಪಟ್ಟಿ ಅಳಿಸಲಾಗಿರಲಿಲ್ಲ. ಆದರೆ ಇತ್ತೀಚೆಗೆ ಜಿಲ್ಲೆಯ ಕೆಲವು ತಾಲೂಕುಗಳ ಕೆಲವು ಭಾಗದಲ್ಲಿ ನೀರಾವರಿಯಾಗಿದೆ. ಆದರೆ ಇಡೀ ಜಿಲ್ಲೆಯೇ ಸಂಪೂರ್ಣ ನಿರಾವರಿಯಾಗುವ ಅವಶ್ಯಕತೆ ಇದೆ. ಇದಕ್ಕೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಒದಗಿಸುವ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಮಾತ್ರ ಹರಿಯುವ ದೋಣಿ ನದಿಗೆ ಕಾಯಕಲ್ಪ ಬೇಕಿದೆ.
ಇಡೀ ದೋಣಿ ನದಿಯ ಹೂಳೆತ್ತುವ ಕೆಲಸವಾಗಬೇಕು. ಆಗ ನದಿ ಇಕ್ಕೆಲದ ಪ್ರದೇಶಗಳ ರೈತರಿಗೆ ಅನುಕೂಲವಾಗಲಿದೆ. ವಾಣಿಜ್ಯ ಬೆಳೆಗಳಾಗಿ ಪರಿವರ್ತನೆ ಹೊಂದಿರುವ ಲಿಂಬೆ ಮತ್ತು ದ್ರಾಕ್ಷಿಗೆ ಸಿಕ್ಕ ಪ್ರಾಶಸ್ತ್ಯವು ಜಿಲ್ಲೆಯಲ್ಲಿ ಬೆಳೆಯುವ ಬಿಳಿಜೋಳದ ಬೆಳೆಗೆ ಪ್ರೋತ್ಸಾಹ ಸಿಕ್ಕಿಲ್ಲ. ವಿಜಯಪುರದ ಬಿಳಿಜೋಳ ದೇಶದಲ್ಲಿಯೇ ಹೆಸರುವಾಸಿಯಾದುದು. ಆದರೆ ಈ ಜೋಳದ ಬೆಳೆ ಈಗ ವಾಣಿಜ್ಯ ಬೆಳೆಗಳೊಂದಿಗಿನ ಪೈಪೋಟಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಜೋಳದ ಬೆಳೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಜರೂರು ಮತ್ತು ಯೋಜನೆಗಳ ಅವಶ್ಯಕತೆ ಇದೆ. ಉತ್ತರ ಕರ್ನಾಟಕದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯುವ ಪ್ರಮುಖ ಜಿಲ್ಲೆಯಾದ ವಿಜಯಪುರದಲ್ಲಿ ರೇಷ್ಮೆ ಮಾರುಕಟ್ಟೆ ಮತ್ತು ಅದಕ್ಕೆ ಸಂಬಂಧಿತ ಇತರೆ ಕೈಗಾರಿಕೆಗಳನ್ನು ಆರಂಭಿಸುವ ಅವಶ್ಯಕತೆ ಇದೆ.
ಪಕ್ಕದ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದನ್ನು ಸಂಪೂರ್ಣ ಇಲ್ಲವಾಗಿಸಬೇಕೆಂದರೆ ವಿಜಯಪುರ ಜಿಲ್ಲೆಯ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಶ್ರಮಾಧಾರಿತ ಕೈಗಾರಿಕೆಗಳ ಅವಶ್ಯಕತೆ ಇದೆ. ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಶ್ರಮಾಧಾರಿತ ಕೈಗಾರಿಕೆ ಇಲ್ಲ. ಜಿಲ್ಲೆಯ ಯುವಜನರು ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಮುಗಿಸಿದವರು ದೂರದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್‌ನಂತಹ ನಗರಗಳತ್ತ ದಾಪುಗಾಲಿಡುತ್ತಿದ್ದಾರೆ. ಇದರಿಂದಾಗಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಮಕ್ಕಳು ಅಲ್ಲಿ ಅನಾಥರಂತೆ ಮತ್ತು ಮಕ್ಕಳಿದ್ದೂ ಕೂಡಾ ಇಲ್ಲಿ ತಂದೆತಾಯಿಗಳು ಅನಾಥರಂತೆ ಬದುಕು ಸವೆಸುವಂತಾಗಿದೆ. ಇಂತಹ ಸಮಸ್ಯೆಗಳು ದೂರಾಗಿ ಇಲ್ಲಿನ ಜನರು ತುಂಬುಕುಟುಂಬವಾಗಿ ಜೀವನ ನಡೆಸಬೇಕೆಂದರೆ ಶ್ರಮಾಧಾರಿತ ಕೈಗಾರಿಕೆಗಳು ಬೇಕು. ವಿಜಯಪುರ ಜಿಲ್ಲೆಯವರೇ ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರಾದರೂ ಸಹಸ್ರಾರು ಜನರಿಗೆ ಕೆಲಸ ಒದಗಿಸುವ ಒಂದೇ ಒಂದು ‘ಶ್ರಮಾಧಾರಿತ ಕೈಗಾರಿಕೆ’ ಆರಂಭಿಸಲು ಪ್ರಯತ್ನಗಳಾಗುತ್ತಿಲ್ಲ. ಇತ್ತ ಮುಖ್ಯಮಂತ್ರಿಗಳೂ ಕೂಡ ಗಮನ ಹಾಕಬೇಕು. ಇಲ್ಲದಿದ್ದರೆ ಜಿಲ್ಲೆಯ ಶಾಸಕರು ಅವರ ಗಮನ ಸೆಳೆಯು ಒತ್ತಾಯಿಸಬೇಕು.
ಇಲ್ಲಿ ಬೆಳೆಯುವ ದ್ರಾಕ್ಷಿ ಮತ್ತು ಲಿಂಬೆ ಹಣ್ಣು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಇವುಗಳನ್ನು ಸಂಸ್ಕರಿಸಿಡುವ ಮತ್ತು ಸಕಾಲಿಕ ಮಾರುಕಟ್ಟೆಗೆ ತರುವ ಕೆಲಸವಾಗಬೇಕಿದೆ. ವಿಮಾನ ನಿಲ್ದಾಣದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ಜಿಲ್ಲೆಯ ಲಿಂಬೆ ಮತ್ತು ದ್ರಾಕ್ಷಿ ವಾಯುಮಾರ್ಗದ ಮೂಲಕ ವಿಶ್ವದ ಮಾರುಕಟ್ಟೆ ತಲುಪಬೇಕಿದೆ.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ನಡೆದ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ವಿಜಯಪುರಕ್ಕೆ ಬಂದು ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿ ಹೋಗಿದ್ದಾರೆ. ಇದು ಕೇವಲ ಘೋಷಣೆಯಾಗದೆ ಇದೇ ಬಜೆಟ್‌ನಲ್ಲಿ ಹಣ ಮೀಸಲಿಟ್ಟು, ಕಾಲೇಜು ಆರಂಭಿಸಬೇಕಿದೆ. ದೇಶದಲ್ಲಿಯೇ ಅತಿ ಹೆಚ್ಚು ಜಮೀನು ಹೊಂದಿರುವ ಮತ್ತು ಹಲವಾರು ಮೂಲಭೂತ ಸೌಲಭ್ಯ ಹೊಂದಿರುವ ಈ ಜಿಲ್ಲೆಯು ಉತ್ತರ ಕರ್ನಾಟಕದ ಮೆಡಿಕಲ್ ಹಬ್ ಆಗಿ ಪರಿವರ್ತಿಸುವ ಸಾಧ್ಯತೆಯೂ ಇದೆ. ಈ ಮೂಲಕ ಉತ್ತರ ಕರ್ನಾಟಕದ ಜನತೆ ಆರೋಗ್ಯ ಸೌಲಭ್ಯ ಪಡೆಯಲು ಹುಬ್ಬಳ್ಳಿ, ಬೆಂಗಳೂರಿಗೆ ಅಷ್ಟೇ ಅಲ್ಲ ಪಕ್ಕದ ರಾಜ್ಯ ಮಹಾರಷ್ಟ್ರದ ಸೋಲಾಪುರ, ಮಿರಜ್, ಹಾಗೂ ಸಾಂಗ್ಲಿಗೆ ಹೋಗುವುದನ್ನು ತಪ್ಪಿಸಿ ಇಲ್ಲಿಯೇ ಔಷಧೋಪಚಾರ ಪಡೆಯುವಂತಾಗುತ್ತದೆ.
ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯವೂ ಅನುದಾನ ಕೊರತೆ ಹಾಗೂ ಸೂಕ್ತ ಸಿಬ್ಬಂದಿ ಇಲ್ಲದೆ ನರಳುತ್ತಿದೆ. ಅತಿಯಾದ ಶುಲ್ಕದ ಹೊರೆಯಿಂದಾಗಿ ಬಡ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಬಾಗಿಲು ಸುಲಭವಾಗಿ ತೆರೆಯುತ್ತಿಲ್ಲ. ಮಹಿಳಾ ವಿಶ್ವ ವಿದ್ಯಾಲಯಕ್ಕೆ ಶಕ್ತಿ ತುಂಬುವ ಮತ್ತು ಬಡವರ ಕೈಗೆಟುಕುವ ಶುಲ್ಕದಲ್ಲಿ ಮಹಿಳೆಯರಿಗೆ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿನ ತಿಡಗುಂದಿಯಲ್ಲಿನ ತೋಟಗಾರಿಕೆಯ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಕ್ಕೆ ಹೆಚ್ಚು ಅನುದಾನ ನೀಡಿ ಕಾಲೇಜಾಗಿ ಪರಿವರ್ತಿಸುವ ಅವಶ್ಯಕತೆ ಇದೆ. ಕೇವಲ 60 ಕಿಮೀ ದೂರದಲ್ಲಿರುವ ಬಾಗಲಕೋಟೆ ವಿವಿ ಬಿಟ್ಟು ಜಿಲ್ಲೆಯ ಕಾಲೇಜುಗಳನ್ನು 220 ಕಿಮೀ ದೂರದ ಬೆಳಗಾವಿಗೆ ಸಂಯೋಜನೆಗೊಳಿಸಿರುವುದು ಜಿಲ್ಲೆಯ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ತುಘಲಕ್ ನೀತಿ ಕೈ ಬಿಟ್ಟು ಜಿಲ್ಲೆಯ ವಿದ್ಯಾರ್ಥಿಗಳ ಪರದಾಟ ತಪ್ಪಿಸಬೇಕಿದೆ.
ಹಂಪಿ ಉತ್ಸವ, ದಸರಾ ಉತ್ಸವಕ್ಕೆ ಸಿಕ್ಕಷ್ಟೇ ಪ್ರಾಧಾನ್ಯತೆ ನಮ್ಮ ನವರಸಪುರ ಉತ್ಸವಕ್ಕೂ ಸಿಗಲಿ. ಕನಿಷ್ಟಪಕ್ಷ ಪ್ರತಿ ವರ್ಷವೂ ವಿಜಯಪುರ ಜಿಲ್ಲೆಯ ನವರಸಪುರ ಉತ್ಸವ ಆಯೋಜನೆ ಮಾಡಲು ಸರ್ಕಾರ ಯೋಜನೆ ರೂಪಿಸಬೇಕಿದೆ. 1824ರಲ್ಲಿಯೇ ಸ್ಥಾಪನೆಗೊಂಡ ಡಾ. ರಾಜ್ ಕುಮಾರ್ ಸೇರಿದಂತೆ ರಾಜ್ಯದ ಬಹುತೇಕ ದಿಗ್ಗಜರುಗಳು ಬಂದು ಅಭಿನಯ ಮಾಡಿ ಹೋಗಿದ್ದ ರಾಣಿ ಚೆನ್ಮಮ್ಮ ರಂಗಮಂದಿರ ಪುನರುಜ್ಜೀವನ ಪಡೆಯಬೇಕಿದೆ. ವಿಜಯಪುರದ ಸಾಂಸ್ಕೃತಿಕ ಲೋಕದ ದಿಗ್ಗಜರಾದ ಶ್ರೀರಂಗರು, ಮಧುರ ಚೆನ್ನರು, ನಾಗಚಂದ್ರ, ಕುಮಾರ ವಾಲ್ಮೀಕಿ, ಕೇಶಿರಾಜ, ಕಾಕಾ ಖಾರಕಾನೀಸರಂತಹವರ ನೆನಪು ಅಜರಾಮರಗೊಳಿಸುವ ಕೆಲಸಗಳಾಗಬೇಕಿದೆ. ರಾಜ್ಯದಲ್ಲಿಯೇ ಮಕ್ಕಳ ಸಾಹಿತಿಗಳ ತೊಟ್ಟಿಲೆಂದೇ ಕರೆಸಿಕೊಳ್ಳುವ ಬಿಜಾಪುರದ ಪ್ರಯತ್ನ ರಾಜ್ಯವ್ಯಾಪಿಗೊಳಿಸುವ ಕೆಲಸಗಳತ್ತ ವಿಶೇಷ ಗಮನ ಹರಿಸಬೇಕಿದೆ.
ವಿಜಯಪುರಕ್ಕೆ ಇನ್ನೊಂದು ಹೆಸರೇ ಗುಮ್ಮಟ ನಗರಿ. ಐತಿಹಾಸಿಕ ನಗರ ವಿಜಯಪುರವು ಹೆಜ್ಜೆ ಹೆಜ್ಜೆಗೊಂದು ಸ್ಮಾರಕ ಹೊಂದಿದೆ. ಅವುಗಳ ಸಂರಕ್ಷಣೆಯಾಗಬೇಕಿದೆ. ಗೋಲಗುಂಬಜ್, ಇಬ್ರಾಹಿಂ ರೋಜಾದಂತಹ ಕೆಲವು ಸ್ಮಾರಕಗಳು ಮಾತ್ರವೇ ಬೆಳಕಿನಲ್ಲಿವೆ. ಆದರೆ ಇನ್ನೂ ಎಲೆಮರೆಯ ಕಾಯಿಯಂತಿರುವ ಐತಿಹಾಸಿಕವಾಗಿ ತುಂಬಾ ಮಹತ್ತರವಾದಂತಹ ಸ್ಮಾರಕಗಳನ್ನೂ ಸಂರಕ್ಷಿಸಬೇಕಿದೆ ಮತ್ತು ಬೆಳಕಿಗೆ ತರಬೇಕಿದೆ.
ಈಗಿರುವ ಜಿಲ್ಲಾಧಿಕಾರಿಗಳ ಕಾರ್ಯಾಲಯವು ಆದಿಲ್ ಶಾಹಿಗಳ ಅರಮನೆಯಾದರೆ ಅವರ ಮನೆ ಚೀನಿಮಹಲ ಕೂಡಾ ಐತಿಹಾಸಿಕ ಸ್ಮಾರಕ, ಜತೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮನೆಯೂ ಒಂದು ಸ್ಮಾರಕ. ಇವುಗಳು ಪ್ರವಾಸಿಗರಿಗೆ, ಇತಿಹಾಸ ಪ್ರಿಯರಿಗೆ ಇವತ್ತಿಗೂ ಲಭ್ಯವಾಗಿಲ್ಲ. ಜತೆಗೆ ಅಂಬೇಡ್ಕರ್ ವೃತ್ತದಲ್ಲಿನ ಜಿಲ್ಲಾಧಿಕಾರಿಗಳ ಮನೆ, ಆಸಾರ್‌ಮಹಲ್, ತೂಗೋದ್ಯಾನ, ನರಸಿಂಹ ದೇವಸ್ಥಾನ, ಗಗನಮಹಲ, ಚಾಲುಕ್ಯರ ಕಾಲದ ಮಲ್ಲಿನಾಥ ಬಸದಿ, ಅದಾಲತ್ ಮಹಲ್, ಚೀನಿ ಮಹಲ್, ಜಹಾಜ ಮಹಾಲ್, ದರಬಾರ್ ಹಾಲ್, ದೇವಗಿರಿ ಯಾದವರ ಕಾಲದ ಸ್ವಯಂಭೂ ಶಿವಲಿಂಗದೇವಾಲಯ, ಹಳೆ ತಹಶೀಲ್ದಾರ ಕಚೇರಿ ಆವರಣದ ಬೆರುಗುಗೊಳಿಸುವ ಸ್ಮಾರಕಗಳು, ಹಳೆ ಜಿಲ್ಲಾ ಪಂಚಾಯತ್ ಆವರಣದಲ್ಲಿನ ಸ್ಮಾರಕಗಳು ಅಭಿವೃದ್ದಿಗೊಳ್ಳಬೇಕಿದೆ. ಈ ಆವರಣದಲ್ಲಿನ ಐತಿಹಾಸಿಕ ಸ್ಮಾರಕಗಳಿಗೆ ಅಂಟಿರುವ ಆಧುನಿಕ ಕಲೆಗಳನ್ನು ಅಳುಕಿಸಿದರೆ ಆ ಇಡೀ ಆವರಣವೇ ಇತಿಹಾಸದ ಭವ್ಯತೆಯನ್ನು ತೋರಿಸುವ ಒಂದು ಅದ್ಭುತ ಪ್ರವಾಸಿ ತಾಣವಾಗಲಿದೆ. ಆ ಒಂದು ಚದರ ಕಿ.ಮೀ ಆವರಣದಲ್ಲಿನ ಎಲ್ಲ ಸ್ಮಾರಕಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದರೆ ವಿಜಯಪುರದ ಈ ಆವರಣ ಹಂಪಿ ಅಥವಾ ಓಲ್ಡ್ ಗೋವಾದಂತೆ ಕಾಣಲಾರಂಭಿಸುತ್ತದೆ.
ಹೆಜ್ಜೆಗೊಂದು ಸ್ಮಾರಕ ಹೊಂದಿರುವ ವಿಜಯಪುರದಲ್ಲಿ ಪ್ರವಾಸೋದ್ಯಮ ಇಲಾಖೆ ಇದೆ. ಆದರೆ ಪ್ರವಾಸೋದ್ಯಮವನ್ನು ಒಂದು ಉದ್ಯಮವಾಗಿಸುವಲ್ಲಿ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಎಲ್ಲರೂ ಸೋತಿದ್ದಾರೆ. ಇಡಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ದಿಗೆ ಇಲ್ಲಿ ಒಂದು ವಿಭಿನ್ನ ಮತ್ತು ಸೂಕ್ತ ಮುನ್ನೋಟದ ಯೋಜನೆಗಳು ಬೇಕಿವೆ. ಇದು ರಾಜ್ಯ ಸರ್ಕಾರವೇ ಮಾಡಬೇಕಾದ ಕೆಲಸವಾಗಿದೆ. ಜೊತೆಗೆ ಜಿಲ್ಲೆಯಲ್ಲಿನ ಚಾಲುಕ್ಯರ ಕಾಲದ ತುಂಬಾ ಅಪರೂಪದ ಕೆಲವು ಐತಿಹಾಸಿಕ ಸ್ಮಾರಕಗಳ ರಕ್ಷಣೆಯೂ ಆಗಬೇಕಿದೆ. ಇದಕ್ಕೆ ಸಂಬಂದಿತ ಸ್ಥಳಗಳಲ್ಲಿ ವಿಜಯಪುರದ ಇತಿಹಾಸದ ಶ್ರೀಮಂತಗೊಳಿಸುವಿಕೆಯ ದೃಷ್ಟಿಯಿಂದ ಕೆಲವೆಡೆ ಉತ್ಖನನದ ಅವಶ್ಯಕತೆಯೂ ಇದೆ. ಕೆ ಅರ್ ಎಸ್ ಡ್ಯಾಂನ ಮುಂದುಗಡೆ ಇರುವಂತಹ ಉದ್ಯಾನದಂತಹುದೇ ‘ಉದ್ಯಾನದ ಪಳಿಯುಳಿಕೆ’ಗಳನ್ನು ಮಾತ್ರ ಉಳಿಸಿಕೊಂಡ, ಇಗೀರುವ ಭೂತನಾಳ ಕೆರೆಗಿಂತಲೂ ದೊಡ್ಡದಾದ ಆದಿಲ್ ಶಾಹಿಗಳು ಕಟ್ಟಿದ್ದ ಐತಿಹಾಸಿಕ ‘ರಾಮಲಿಂಗ ಕೆರೆ’ ರಿಯಲ್ ಎಸ್ಟೇಟ್‌ನ ಕಪಿಮುಷ್ಟಿಯಲ್ಲಿ ಕೊನೆಯುಸಿರೆಳೆಯುತ್ತಿದೆ.
ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ಹೈದರಾಬಾದ್ ಕರ್ನಾಟಕಕ್ಕೆ ಅಂಟಿಕೊಂಡಿರುವ ತಾಲೂಕುಗಳನ್ನೊಳಗೊಂಡ ವಿಜಯಪುರ ಜಿಲ್ಲೆ ಮರು ಅಸ್ತಿತ್ವ ಪಡೆದುಕೊಂಡಿತ್ತಾದರೂ ಆರ್ಟಿಕಲ್ 371(ಜೆ) ಅಡಿ ಸಿಗುವ ವಿಶೇಷ ಸ್ಥಾನಮಾನದಿಂದಲೂ ವಂಚಿತವಾಯಿತು. ಆದರೆ ಕನಿಷ್ಠ ಪಕ್ಷ ಈ ಜಿಲ್ಲೆಯ ಅಭಿವೃದ್ಧಿಗೆ ಅವಶ್ಯಕ ಅನುದಾನವನ್ನು ನೀಡಿ ಮೇಲಕ್ಕೆತ್ತುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಯ ಜನರ ನಿರಿಕ್ಷೇಗಳು ನೂರಾರು. ಅದರೆ ಅದರಲ್ಲಿ ಹಲವಾದರೂ ಈಡೇರಲಿ ಎಂದು ಜನತೆ ಬಯಸುತ್ತಿದೆ. ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಹಣೆಬರಹ ಹೊಂದಿರುವ ಈ ಜಿಲ್ಲೆಗೆ ರಾಜ್ಯ ಸರ್ಕಾರ ಏನು ಕೊಡುತ್ತದೆ ಎಂದು ಇಡೀ ಜಿಲ್ಲೆಯ ಜನತೆಯೇ ಕಾತರದಿಂದ ರಾಜ್ಯ ಬಜೆಟ್ಟನ್ನು ಎದುರು ನೋಡುತ್ತಿದೆ.

ಬರಹ : ಹೆಚ್ ಟಿ ಭರತಕುಮಾರ, ಸಾಮಾಜಿಕ ಕಾರ್ಯಕರ್ತರು, ವಿಜಯಪುರ





