ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಧರಣಿ ನಡೆಸಲು ಮುಂದಾದ ಹೋರಾಟಗಾರರನ್ನು ಬಂಧಿಸಿ, ಸುಳ್ಳು ಮೊಕದ್ದಮೆ ದಾಖಲಿಸಿರುವ ಕ್ರಮ ಖಂಡನೀಯ ಎಂದು ಎಸ್‌ಯುಸಿಐ(ಕಮ್ಯುನಿಸ್ಟ್ ಪಕ್ಷ) ಮುಖಂಡ ಡಾ. ಸುನೀತ್ ಕುಮಾರ್ ಟಿ ಎಸ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸುದ್ದಿಗೋಷ್ಟಿಯಲ್ಲಿ ಪಕ್ಷದ ಪರವಾಗಿ ಮಾತನಾಡಿದ ಅವರು, “ಪಿಪಿಪಿ ಮಾದರಿಯ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಹೋರಾಟ ಸಮಿತಿಯು ನಿರಂತರವಾಗಿ 100ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿತ್ತು. ಅಷ್ಟಾದರೂ ಜಿಲ್ಲೆಯ ಜನಪ್ರತಿನಿಧಿಗಳ ಸ್ಪಷ್ಟ ಪ್ರತಿಕ್ರಿಯೆ ಸಿಗದ ಕಾರಣ 2026ರ ಜನವರಿ 1ರಂದು ಹೋರಾಟದ ಮುಂದಿನ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಧರಣಿ ನಡೆಸಲು ಪ್ರತಿಭಟನಾಕಾರರು ಮುಂದಾದರು. ಇದನ್ನು ತಡೆದು ಪೊಲೀಸರು ಹೋರಾಟಗಾರರನ್ನು ಬಂಧಿಸಲು ಯತ್ನಿಸಿದಾಗ ನಡೆದ ತಳ್ಳಾಟದಲ್ಲಿ ಶ್ರೀ ಸಂಗನ ಬಸವೇಶ್ವರ ಸ್ವಾಮೀಜಿ ಮತ್ತು ಮಫ್ತಿಯಲ್ಲಿದ್ದ ಪೊಲೀಸರ ನಡುವೆ ಘರ್ಷಣೆ ನಡೆದ ಘಟನೆ ವರದಿಯಾಗಿದೆ. ಮುಂಚಿತವಾಗಿ ಘೋಷಿಸಿ ಮಾಡಿದ ಈ ಜನಪರ ಹೋರಾಟದ ಸಂದರ್ಭದಲ್ಲಿ ನಡೆದ ಈ ಅನುಚಿತ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸುವ ಬದಲು ಕೊಲೆಯತ್ನ, ಕೊಲೆ ಬೆದರಿಕೆ, ಅಕ್ರಮಕೂಟ ಮುಂತಾದ ಕರಾಳ ಸೆಕ್ಷನ್‌ಗಳನ್ನು ಹಾಕಿ ಸ್ವಾಮೀಜಿ ಜತೆಗೆ, ಹೆಣ್ಣು ಮಕ್ಕಳನ್ನೂ ಸೇರಿಸಿ ಇತರ ಹೋರಾಟಗಾರರರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಆರೋಪಿಸಿದರು.
“ಇದು ಈ ಜನಪರ ಹೋರಾಟವನ್ನು ಹತ್ತಿಕ್ಕುವ ಪಿತೂರಿಯಲ್ಲದೆ ಬೇರೇನೂ ಅಲ್ಲ. ಆದ್ದರಿಂದ, ಈ ಕೇಸುಗಳನ್ನು ರದ್ದುಪಡಿಸಿ, ವಿನಾಕಾರಣ ಬಂಧಿತರಾದ ಅನಿಲ್ ಹೊಸಮನಿ, ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಸಂಗನಬಸವ ಸ್ವಾಮೀಜಿ, ಭೋಗೇಶ ಸೋಲಾಪೂರ ಹಾಗೂ ಸಿದ್ರಾಮ ಹಳ್ಳೂರ ಈ 6 ಮಂದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಎಲ್ಲ 27 ಹೋರಾಟಗಾರರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಕೈಬಿಡಬೇಕು. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ನ್ಯಾಯಯುತ ಆಗ್ರಹವನ್ನು ಈಡೇರಿಸಬೇಕು” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
“ಈಗಾಗಲೇ ರಾಜ್ಯಾದ್ಯಾಂತ ನಮ್ಮ ಸಂಘಟನೆಗಳಿಂದ ಎಲ್ಲರನ್ನು ಬಿಡುಗಡೆ ಮಾದಲು ಆಗ್ರಹಿಸಿ ಹೋರಾಟ ಮಾಡಲಾಗಿದೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ಮತ್ತೆ ರಾಜ್ಯಾದ್ಯಂತ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪಿಪಿಪಿ ವಿರುದ್ಧ ಹೋರಾಟಗಾರರ ಬಂಧನ: ಬಿಡುಗಡೆಗೆ ಜನ ವೇದಿಕೆ ಸಂಘಟನೆ ಆಗ್ರಹ
“ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಆ ಹೋರಾಟದ ಧ್ವನಿಯನ್ನು ಹೀಗೆ ಹತ್ತಿಕ್ಕುವುದು ಜನವಿರೋಧಿ ನಡೆಯಾಗುತ್ತದೆ. ಆದ್ದರಿಂದ ಹೋರಾಟಗಾರರನ್ನು ಬಿಡುಗಡೆ ಮಾಡಿ ಹಾಗೂ ಈ ಕೂಡಲೇ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಿ, ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ಸುದ್ಧಿಗೋಷ್ಟಿಯಲ್ಲಿ ಸಿದ್ರಾಮ ಹಿರೇಮಠ, ಶಿವರಂಜನಿ ಇದ್ದರು.





