ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸಮೀಪದ ಆಲಮಟ್ಟಿ ಆರ್‌ಎಸ್ ನಿವಾಸಿ ಶರಣಪ್ಪ ಕೊಲ್ಹಾರ ಅವರ ಮನೆಯಲ್ಲಿ ಸುಮಾರು 25 ತೊಲೆ ಚಿನ್ನಾಭರಣ ಕಳವಾಗಿದ್ದು, ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಣಪ್ಪ ಅವರ ಪತ್ನಿ, ಖಾಸಗಿ ಶಾಲಾ ಶಿಕ್ಷಕಿಯಾಗಿರುವ ಗುರುಭಾಯಿ ಕೊಲ್ಹಾರ ಅವರು ಬಾದಾಮಿ ಬನಶಂಕರಿ ಜಾತ್ರೆಗೆ ತೆರಳಿದ್ದರೆ, ಶರಣಪ್ಪ ಅವರು ತಮ್ಮ ಸ್ವಗ್ರಾಮ ಹಿರೇಗೋಳ ಬಾಳಕ್ಕೆ ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ನಿಡಗುಂದಿ ಸಿಪಿಐ ಶರಣಗೌಡ ಗೌಡರ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಕಳ್ಳರ ಪತ್ತೆಗೆ ನಿಡಗುಂದಿ ಸಿಪಿಐ ನೇತೃತ್ವದಲ್ಲಿ ಎರಡು ತಂಡ ರಚಿಸಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ಡಿವೈಎಸ್ಪಿ ಬಲ್ಲಪ್ಪನಗಾವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ
ಪೊಲೀಸ್ ಸಿಬ್ಬಂದಿಗಳು ನೆರೆಹೊರೆಯವರಿಗೆ ತಮ್ಮ ತಮ್ಮ ಮನೆಯ ಹೊರಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಸೂಚಿಸಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದಲೂ ಮುಖ್ಯ ಹಾಗೂ ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದರು.





