10 ರಿಂದ 12 ಸಾವಿರ ಹಿಂದುಳಿದ ರೈತರಿಗೆ ಆಧಾರವಾಗಿದ್ದ ʼಗಂಗಾ ಕಲ್ಯಾಣ ಯೋಜನೆʼಗೆ ಸಿದ್ದರಾಮಯ್ಯ ಸರ್ಕಾರ ಎಳ್ಳು ನೀರು ಬಿಡುವ ಪ್ರಯತ್ನ ಮಾಡುತ್ತಿದೆ. ಹಿಂದುಳಿದವರ ಹಾಗೂ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಂಗಾ ಕಲ್ಯಾಣ ಯೋಜನೆ ಸಣ್ಣ ರೈತರಿಗೆ ಒಂದು ವರದಾನವಾಗಿತ್ತು. ಬೋರ್ವೆಲ್ ಕೊರೆಯಿಸಲು ಸಾಧ್ಯವಾಗದ ಬಡ ರೈತರು ಈ ಯೋಜನೆ ಮೂಲಕ ಬೋರ್ವೆಲ್ ಕೊರೆಸಿಕೊಳ್ಳುತ್ತಿದ್ದರು. ಪರಿಣಾಮ ಪ್ರತಿ ವರ್ಷ 15 ಸಾವಿರಕ್ಕೂ ಹೆಚ್ಚು ಜನರು ಈ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಾಗುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈ ಯೋಜನೆಗೆ ಆದ್ಯತೆ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ದಲಿತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಬೆನ್ನಿಗೆ ಚೂರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಹಿಂದೆ ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತಂದಿದ್ದೆ. ರಾಜ್ಯ ಸರ್ಕಾರ ತಮ್ಮ ಪಂಚಗ್ಯಾರೆಂಟಿ ಯೋಜನೆಗೆ ಹಣಕಾಸಿನ ಅಗತ್ಯ ಪೂರೈಸಲು ಗಂಗಾ ಕಲ್ಯಾಣ ಯೋಜನೆಯ ಅನುದಾನ ಬಳಸಿಕೊಳ್ಳುತ್ತಿದೆ. ಈಗಾಗಲೇ ಸುಮಾರು 42 ಸಾವಿರ ಕೋಟಿ ಎಸ್ಸಿಎಸ್ಪಿ-ಟಿಎಎಸ್ಪಿ ಅನುದಾನ ಹಾಗೂ 187 ಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದೆ” ಎಂದು ಕುಟುಕಿದರು.
ಇದನ್ನೂ ಓದಿ: ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ
2023-24ರಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೇವಲ 3000 ಬೋರ್‌ವೆಲ್ ಕೊರೆಸಲಾಗಿದೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖ ಮಾಡಿ ಯೋಜನೆಯನ್ನೇ ಬಂದ್ ಮಾಡುವ ಹುನ್ನಾರದಲ್ಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.





