ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಬಿಎಲ್‌ಡಿಇ ಆಸ್ಪತ್ರೆ ಅತ್ಯುತ್ತಮ ಸೇವೆ ಮಾಡುತ್ತಿದೆ ಎಂದು ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಬಿಎಲ್‌ಡಿಇ ಆಸ್ಪತ್ರೆ ಮತ್ತು ಸರ್ವೋದಯ ಸಾಮಾಜಿಕ ಕ್ಷೇಮಾಭಿವೃದ್ಧಿ ಹಾಗೂ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
“ಉತ್ತಮ ಆರೋಗ್ಯ ಇಂದು ಮಹತ್ವದ್ದಾಗಿದೆ. ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೆ, ರಕ್ತದ ಅಗತ್ಯವಿರುವ ರೋಗಿಗಳಿಗೆ ವರದಾನವಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಮನರೇಗಾ ಕಾಯ್ದೆ ಮುಂದುವರೆಸುವಂತೆ ಗ್ರಾ.ಪಂ. ಸದಸ್ಯರ ಒಕ್ಕೂಟ ಆಗ್ರಹ
ಇದೇ ವೇಳೆ ರಕ್ತದಾನ ಮಾಡಿದ ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ಸಿ ದೇಸಾಯಿ ಮಾತನಾಡಿ, “ಬಿಎಲ್‌ಡಿಇ ಸಂಸ್ಥೆ ನಿರಂತರವಾಗಿ ಸಾಮಾಜಿಕ ಕಾಳಜಿಯೊಂದಿಗೆ ಎಷ್ಟೋ ಮಂದಿ ರೋಗಿಗಳ ಜೀವ ಉಳಿಸುವ ಕಾರ್ಯ ಮಾಡುತ್ತಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ 400ಕ್ಕಿಂತಲೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 20 ಯುವಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಪರಿಸರ ಚಿಂತಕ ಡಾ. ಎಂ ಆರ್ ದೇಸಾಯಿ ಇದ್ದರು.





