ಆಲಮಟ್ಟಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಭರವಸೆ ನೀಡಬೇಕೆಂದು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅರವಿಂದ ಕುಲಕರ್ಣಿ ಮಾತನಾಡಿ, ಪಿಪಿಪಿ ಮಾದರಿಯನ್ನು ಕೈಬಿಡಬೇಕು, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವೇ ಬೇಕು ಎಂದು ಹೇಳಿದರು.
ವೈದ್ಯಕೀಯ ಕಾಲೇಜಿನ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲಿದೆ. ಸೆಪ್ಟೆಂಬರ್ 9ರಂದು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸಮಿತಿ ಸದಸ್ಯ ಬಿ. ಭಗವಾನರೆಡ್ಡಿ ಹೇಳಿದರು
ಯಾವುದೇ ಕಾರಣಕ್ಕೂ ವೈದ್ಯಕೀಯ ಕಾಲೇಜನ್ನು ಖಾಸಗಿಯರಿಗೆ ಒಪ್ಪಿಸಲು ಬಿಡುವುದಿಲ್ಲ ಎಂದು ಅಣ್ಣಾರಾಯ ಇಳಿಗೇರ ಹೇಳಿದರು.
ವಿಜಯಪುರದಲ್ಲಿ 150ಕ್ಕೂ ಹೆಚ್ಚು ಎಕರೆ ಜಾಗವಿದೆ. ಒಂದು ವೇಳೆ ಖಾಸಗೀಕರಣಕ್ಕೆ ಅವಕಾಶ ನೀಡಿದರೆ ಜಿಲ್ಲಾ ಬಂದ್‌ಗೆ ಕರೆ ಕೊಡಲಾಗುತ್ತದೆ ಶ್ರೀನಾಥ ಪೂಜಾರಿ ಎಚ್ಚರಿಸಿದ್ದಾರೆ.
ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಸ್ತು ನೀಡಲಾಗಿತ್ತು. ರಾಜ್ಯದ ಮಾದರಿ ಆಸ್ಪತ್ರೆ ಎಂದು ಹೆಸರಾಗಿರುವ ವಿಜಯಪುರದಲ್ಲಿ ಕೂಡಲೇ ಕಾಲೇಜು ಆರಂಭಿಸಬೇಕು ಎಂದು ಕೆ.ಎಫ್. ಅಂಕಲಗಿ ಹೇಳಿದರು.
ಅಕ್ರಮ ಮಾಶಾಳಕರ ಮಾತನಾಡಿ ಆಲಮಟ್ಟಿಯಲ್ಲಿ ಮುಖ್ಯಮಂತ್ರಿಯನ್ನು ನೇರವಾಗಿ ಭೇಟಿ ಮಾಡಿ, ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಸುರೇಶ ಜೆ.ಬಿ, ಸಿ.ಬಿ. ಪಾಟೀಲ, ಬಾಬುರಾವ ಬೀರಕಬ್ಬಿ, ಲಕ್ಷಣ ಹಂದ್ರಾಳ, ಭರತಕುಮಾರ ಹೆಚ್.ಟಿ, ಚಂದ್ರಶೇಖರ ಗಂಟೆಪ್ಪಗೋಳ, ದಸ್ತಗೀರ ಉಕ್ಕಲಿ, ಶ್ರೀಕಾಂತ ಕೊಂಡಗೂಳಿ, ಗೀತಾ ಹೆಚ್., ಸಿದ್ರಮಯ್ಯ ಹಿರೇಮಠ, ಚನ್ನು ಕಟ್ಟಿಮನಿ, ಜಗದೇವ ಸೂರ್ಯವಂಶಿ, ಮಹಾದೇವ ಬನಸೋಡೆ, ವಿದ್ಯಾವತಿ ಅಂಕಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





