ಅಂಗಾಂಗ ದಾನ ಮಾಡಿದ ದಿ. ಬಲರಾಮ ಬಾಗಲಕೋಟ ಅವರ ಕುಟುಂಬದ ಒಬ್ಬರಿಗೆ ಶಿಕ್ಷಣ ಅಥವಾ ಉದ್ಯೋಗ ನೀಡಲು ಬಿಎಲ್‌ಡಿಈ ಸಂಸ್ಥೆ ನಿರ್ಧರಿಸಿದೆ. ಅಲ್ಲದೆ, ಅವರ ಕುಟುಂಬಕ್ಕೆ ನಮ್ಮ ಆಸ್ಪತ್ರೆಯಿಂದ ಎಲ್ ಕಾರ್ಡ್(ಜೀವನಪರ್ಯಂತ ಉಚಿತ/ರಿಯಾಯಿತಿ ಚಿಕಿತ್ಸಾ ಸೌಲಭ್ಯದ ಕಾರ್ಡ್) ಒದಗಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಎಲ್‌ಡಿಇ ಅಧ್ಯಕ್ಷ ಎಂ ಬಿ ಪಾಟೀಲ ಹೇಳಿದರು.
ವಿಜಯಪುರ ನಗರದ ಬಿಎಲ್‌ಡಿಇ ಟೀಮ್ಡ್ ವಿವಿಯಲ್ಲಿ ಅಂಗಾಂಗ ದಾನಿ ಬಲರಾಮ ಕೃಷ್ಣ ಬಾಗಲಕೋಟೆ ಅವರ ಕುಟುಂಬಕ್ಕೆ ಗೌರವ ಸಲ್ಲಿಸಿದ ನಂತರ ಮಾತನಾಡಿದರು.
“ಯುವಕ ದಿ. ಬಲರಾಮ ಮತ್ತು ಅವರ ಕುಟುಂಬದವರ ತ್ಯಾಗ ಸ್ಮರಣೀಯ. ಬಲರಾಮ ಅವರು ಸಾವಿನಲ್ಲೂ ಬೇರೆಯವರ ಬದುಕಿಗೆ ಆಸರೆಯಾಗಿದ್ದಾರೆ. ಅವರಿಂದಲೇ ಬಸವ ನಾಡಿನಲ್ಲಿ ಅಂಗಾಂಗ ದಾನದ ಅಭಿಯಾನ ಆರಂಭವಾಗಿದೆ. ‘ಮಿಷನ್ ಬಲರಾಮ ಎನ್ನುವ ಈ ಅಭಿಯಾನದ ನೇತೃತ್ವವನ್ನು ಬಿಎಲ್‌ಡಿಇ ಸಂಸ್ಥೆ ವಹಿಸಲಿದೆ. ನಾನೇ ಪ್ರಥಮವಾಗಿ ಅಂಗಾಂಗ ದಾನದ ವಾಗ್ದಾನ ಮಾಡುತ್ತಿದ್ದೇನೆ” ಎಂದು ತಿಳಿಸಿದರು.
“ಬಲರಾಮನ ಕುಟುಂಬ ಅತ್ಯಂತ ನೋವಿನಲ್ಲೂ ಸಂಯಮ ಕಳೆದುಕೊಳ್ಳದೆ ಆತನ ಅಂಗಾಂಗ ದಾನ ಮಾಡಲು ಸಹಮತಿ ನೀಡಿದ್ದು ಸಮಾಜಕ್ಕೆ ಪ್ರೇರಣೆಯಾಗಿದೆ. ಸಾವಿನ ನಂತರವೂ ಅಂಗಾಂಗ ದಾನ ಮಾಡಿ ಹಲವರ ಬದುಕಿಗೆ ಬೆಳಕಾಗಬಹುದು ಎಂಬ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಇದೊಂದು ಮಾನವೀಯತೆಗೆ ದೊಡ್ಡ ಸಂದೇಶವಾಗಿದೆ. ಹೀಗಾಗಿ ಬಲರಾಮ ಅಮರರಾಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ
ಡಾ.ಅರುಣ ಮಾತನಾಡಿ, “ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದೇಹದಿಂದ ಹೃದಯ, ಶ್ವಾಶಕೋಶ, ಲಿವರ್, ಕಿಡ್ನಿ, ಪ್ಯಾಂಕ್ರಿಯಾಸಿಸ್, ಕಣ್ಣು ಗುಡ್ಡೆಗಳು, ಚರ್ಮ, ಎಲುಬು, ಹೃದಯದ ವಾಲ್ವಾ, ರಕ್ತನಾಳಗಳು, ಕೋಶಗಳ(ಟಿಶ್ಯೂ)ಗಳನ್ನು ದಾನ ಮಾಡಬಹುದು. ಅಂಗಾಂಗ ದಾನ ಜನಂದೋಲನದ ರೂಪ ಪಡೆಯಬೇಕಿದೆ. ಇದರಿಂದ ಅಂಗಾಗಗಳನ್ನು ನೀಡಿದ ನಂತರ ಇತರರಿಗೆ ನೆರವಾಗಬಹುದು” ಎಂದರು.
ಬಿಎಲ್‌ಡಿಇ ವಿವಿ ಕುಲಪತಿ ಡಾ. ಜಯರಾಜ, ಡಾ. ವಿಜಯಕುಮಾರ ಕಲ್ಯಾಣಪ್ಪ ಗೋಳ, ಡಾ.ಎಸ್ ಬಿ ಪಾಟೀಲ, ಡಾ.ತೇಜಸ್ವಿನಿ ಸೇರಿದಂತೆ ಇತರರು ಇದ್ದರು.





