ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ವಿಜಯಪುರ ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಗರ, ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, “ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು, ಬಸ್ ನಿಲ್ದಾಣ ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಗುರುತಿಸಿ ತಾತ್ಕಾಲಿಕ ಶೆಡ್‌ನಲ್ಲಿ ಆಶ್ರಯ ಕಲ್ಲಿಸಬೇಕು” ಎಂದರು.
“ಜಿಲ್ಲಾದ್ಯಂತ ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿ ಕಾರಿಗಳು ಕ್ರಮ ವಹಿಸಬೇಕು. ಲಸಿಕೆ ಹಾಕಬೇಕು. ಲಸಿಕೆ ಹಾಕಿದ ಕುರಿತು ಗುರುತಿಗಾಗಿ ಬಣ್ಣ ಹಚ್ಚಬೇಕು. ಪಶು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದ್ದು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಶು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸಬೇಕು” ಎಂದು ಸೂಚಿಸಿದರು.
“ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಬೀದಿನಾಯಿಗಳ ಚಲನವಲನ ಕುರಿತು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಆ ಕಚೇರಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಇದನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವೈದ್ಯರು ಪ್ರೀತಿ, ಸಮಾಧಾನದಿಂದ ಮಾತನಾಡಿದರೆ ರೋಗಿಗಳು ಅರ್ಧ ಗುಣವಾಗುತ್ತಾರೆ: ಡಾ. ಸಿದ್ದನಗೌಡ ಎ ಪಾಟೀಲ
ಕರ ವಸೂಲಿ ಪ್ರಗತಿ ಸಾಧಿಸಿ: “ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿ ಪ್ರಗತಿ ಸಾಧಿಸಿ, ಅನುದಾನವನ್ನು ಗ್ರಂಥಾಲಯ, ವಿದ್ಯುತ್ ಬಿಲ್ ಬಾಕಿ ಪಾವತಿಸಲು ಕ್ರಮ ವಹಿಸಬೇಕು. ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ, ರಸ್ತೆಗಳನ್ನು ಸಮರ್ಪಕವಾಗಿ ಒದಗಿಸಬೇಕು” ಎಂದರು.
“ಆರೋಗ್ಯ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಂಗ್ರಹಗಾರಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು, ಸ್ವಚ್ಛಗೊಳಿಸಿದ ಕುರಿತು ಪುಸ್ತಕದಲ್ಲಿ ನಮೂದಿಸಬೇಕು” ಎಂದು ಡಾ.ಆನಂದ್ ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.





