ಹಳ್ಳಗಳಲ್ಲಿ ಹೂಳು ತೆಗೆದು ಮಳೆಗಾಲದಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಸದ್ಬಳಕೆ ಮಾಡಲು ಚೆಕ್ ಡ್ಯಾಂ ನಿರ್ಮಿಸುವ ₹100 ಕೋಟಿ ವೆಚ್ಚದ ಪೈಲಟ್ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಹೇಳಿದರು.
ವಿಜಯಪುರ ಜಿಲ್ಲೆಯ ತಿಕೋಟಾದ ತಾಲೂಕಿನ ಹಳಚಾಪುರ ರಸ್ತೆಯ ಸಾತಲಿಂಗಯ್ಯ ಸಾಲಿಮಠ ಅವರ ತೋಟದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಕೋಟಾ ತಾಲೂಕು ಘಟಕದಿಂದ ಆಯೋಜಿಸಿದ ರೈತ ಕ್ಷೇತ್ರೋತ್ಸವ ಮತ್ತು ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರಿಗೆ ವಿಶೇಷ ತಜ್ಞರಿಂದ ಚಿಂತನಗೋಷ್ಟಿ, ಕೃಷಿಗೆ ಸಂಬಂಧಿಸಿದಂತೆ ಉಪನ್ಯಾಸ ಮತ್ತು ಕೃಷಿ ಉತ್ಪನ್ನಗಳಿಂದ ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳಲ್ಲಿ 67 ಹಳ್ಳಗಳಿಗೆ 206 ಚೆಕ್ ಡ್ಯಾಂ ನಿರ್ಮಿಸಲಾಗುವುದು. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ” ಎಂದು ಅವರು ತಿಳಿಸಿದರು.
“ಕಬ್ಬು ಮತ್ತು ಸಕ್ಕರೆ ಬೆಲೆ ನಿರ್ಧಾರ, ಎಥೆನಾಲ್ ಖರೀದಿ ಹಾಗೂ ಬೆಂಬಲ ಬೆಲೆ ನಿಗದಿ ವಿಷಯಗಳೂ ಕೂಡ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ನಿರ್ಧಾರವಾಗುತ್ತವೆ. ಆದರೂ ರಾಜ್ಯ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ತಿಕೋಟಾ-ಹಳಚಾಪುರ ರಸ್ತೆಯನ್ನು ₹350 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. 3.50 ಕೋಟಿ ವೆಚ್ಚದಲ್ಲಿ 750 ಕಿಮೀ ಹೊಲಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ರೈತರು ಹಂತಹಂತವಾಗಿ ಸಾವಯವ ಕೃಷಿ ಅಳವಡಿಸಿಕೊಳ್ಳಬಹುದು. ಹನಿ ನೀರಾವರಿ ಮೂಲಕ ಕಬ್ಬು ಬೆಳೆದರೆ ನೀರು ಉಳಿತಾಯ, ಇಳುವರಿ ಹೆಚ್ಚಳ, ಕೃಷಿ ಭೂಮಿಯ ಗುಣಮಟ್ಟ ಉಳಿಸಿಕೊಳ್ಳಲು ಸಾಧ್ಯ. ರೈತರಿಗೆ ಹನಿ ನೀರಾವರಿ ಸಲಕರಣೆ ಒದಗಿಸಲು ಸಕ್ಕರೆ ಕಾರ್ಖಾನೆಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುವುದು. ಬಾಬಾನಗರ ಬಳಿ ₹567 ಕೋಟಿ ವೆಚ್ಚದಲ್ಲಿ ಬೃಹತ್ ಜಲಸಂಗ್ರಹಾಲಯ ನಿರ್ಮಿಸಲಾಗುತ್ತಿದೆ. ರೈತರ ಬಾಳು ಹಸನಾಗಿಸಲು ಸಕಲ ಯೋಜನೆಗಳನ್ನು ಕೈಗೊಳ್ಳಲಾಗುವುದು” ಎಂದು ಹೇಳಿದರು.
ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಮಾತನಾಡಿ, “ಕುಡಿಯುವ ನೀರಿಗೂ ಪರದಾಡುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ನೀರಾವರಿ ಮಾಡಿದ್ದಾರೆ. ರೈತರ ಬದುಕು ಹಸನಾಗಿಸಿದ್ದಾರೆ. ರಾಜ್ಯದಿಂದ ಸಂಗ್ರಹವಾಗುವ ತೆರಿಗೆಗೆ ತಕ್ಕಷ್ಟು ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಸಚಿವರು ರೈತಪರ ಚಿಂತಕರಾಗಿದ್ದಾರೆ” ಎಂದು ಹೇಳಿದರು.
ಸಂಘದ ತಾಲೂಕು ಘಟಕದ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಮಾತನಾಡಿ, “ಹುಲ್ಲುಕಡ್ಡಿ ಬೆಳೆಯದ ಈ ಭಾಗದಲ್ಲಿ ಈಗ ಕೊಳವೆ ಭಾವಿಗಳಲ್ಲಿ ನೀರು ಬಂದಿದೆ. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಾವು ಇಂದು ಹೊಲದಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ನಮ್ಮ ಭಾಗದ ರೈತರ ಬಾಳು ಹಸನು ಮಾಡಿದ್ದಾರೆ. ಸಾಲ ಮಾಡುತ್ತಿದ್ದ ನಾವು ಬಂಗಾರದಂಥ ಬೆಳೆ ಬೆಳೆಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸಚಿವ ಎಂ ಬಿ ಪಾಟೀಲ ಅವರನ್ನು ಕೃಷಿ ಉತ್ಪನ್ನಗಳಿಂದ ತುಲಾಭಾರ ಮಾಡುವ ಕಾರ್ಯಕ್ರಮ ಆಯೋಜಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್
ಈ ಸಂದರ್ಭದಲ್ಲಿ ತಿಕೋಟಾ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು, ಶಿರಸ್ಯಾಡ ಹಿರೇಮಠದ ಶ್ರೀ ಅಭಿನವ ಮುರುಗೇಂದ್ರ ಶಿವಾಚಾರ್ಯರು, ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಭೀಮರಾವ ತಮ್ಮಣ್ಣ ಹಂಗರಗಿ, ಮಲ್ಲಿಕಾರ್ಜುನ ಹಂಜಗಿ, ಬಸಯ್ಯ ಗುರಯ್ಯ ವಿಭೂತಿ, ಜಗದೀಶಗೌಡ ಎಂ. ಪಾಟೀಲ, ವಿಜಯಕುಮಾರ ಎಂ. ಪಾಟೀಲ, ಪ್ರತಿಭಾ ಜಗದೀಶಗೌಡ ಪಾಟೀಲ, ಶೋಭಾ ಮಹಾರುದ್ರ ಹಲ್ಯಾಳ, ಲೇಪು ರೇವಣಸಿದ್ಧ ಕೊಣ್ಣೂರ, ಭಾಗೀರಥಿ ಚಂ. ತೇಲಿ, ಸಿದಗೊಂಡ ರುಗ್ರಗೌಡ, ಎಚ್ ಎಂ ಭಗವಾನ್, ನಾರಾಯಣ ಶಂಕರ ಪರಮಾಜಿ, ಕಲ್ಲು ಸೊನ್ನದ, ರಾಹುಲ ಕುಬಕಡ್ಡಿ, ಗಿರೀಶ ಕುಲಕರ್ಣಿ, ಸಿದ್ರಾಮ ಪೂಜಾರಿ, ಸಿದ್ದಪ್ಪ ಭೊಸಗೊಂಡ, ರಾಮು ಮಾಳಿ, ಸಾಹೇಬಗೌಡ ಕೆಂಪವಾಡ, ಮಾನಿಂಗಪ್ಪ ಮಂಟೂರ, ಮಮ್ಮುಲಾಲ ಮುಜಾವರ, ಸದಾಶಿವಯ್ಯ ಅರಕೇರಿಮಠ, ಬಸವ ಟ್ರಾಯ್ ಶಿವಶಂಕ್ರಯ್ಯ ಮಠ, ಅಧಿಕಾರಿಗಳಾದ ಶಿವನಗೌಡ ಪಾಟೀಲ, ಸುರೇಶ ಚವಲರ, ಬಸವಂತರಾಯಗೌಡ ಬಿರಾದಾರ, ದೇವರಾಜ ಉಳ್ಳಾಗಡ್ಡಿ, ಮಂಜುನಾಥ ಜಾನಮಟ್ಟು, ಜಿ ಎಸ್ ದೇಶಮುಖ, ಬಸನಗೌಡ ಪಾಟೀಲ, ಅಂಬಣ್ಣ ಹರಳಯ್ಯ, ಮಲ್ಲು ರಾಣಗಟ್ಟಿ, ರಘು ನಡುವಿನಮನಿ, ಗಿರಿಮಲ್ಲಯ್ಯ ಮಠಪತಿ, ಗಾಯತ್ತಿ ಹಟ್ಟಿಮಠ, ಶಿವಲೀಲಾ ಸಾಲಿಮಠ ಸೇರಿದಂತೆ ಇತರರು ಇದ್ದರು.





