ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಶಾಲೆಗಳಲ್ಲಿ ಹಿರಿಯ ಪಾಲಕರ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಅಶೋಕ ಎಸ್ ವಾರದ ಹೇಳಿದರು.
ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ ಎಂ ಪಾಟೀಲ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಪೂರ್ವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಘಟಿಕೋತ್ಸವ ಮತ್ತು ಹಿರಿಯ ಪಾಲಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ಇಂದಿನ ಯಾಂತ್ರಿಯ ಜಗತ್ತಿನಲ್ಲಿ ಸಂಬಂಧಗಳ ಬೆಸುಗೆ ಮುಖ್ಯವಾಗಿದೆ. ಮಕ್ಕಳು ಅಜ್ಜ, ಅಜ್ಜಿಯರ ತೊಡೆಯ ಮೇಲೆ ಆಟವಾಡುತ್ತ, ಕಥೆ ಕೇಳುತ್ತ, ಹಾಡು ಹೇಳುತ್ತ ಕಾಲ ಕಳೆಯಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ತಂದೆ- ತಾಯಿಯರ ಜೊತೆಯಲ್ಲಿಯೇ ಹಿರಿಯರ ಪ್ರೀತಿಯೂ ಸಿಗುತ್ತದೆ. ಈ ದಿಸೆಯಲ್ಲಿ ಶ್ರೀ ಬಿ ಎಂ ಪಾಟೀಲ ಪಬ್ಲಿಕ್ ಸ್ಕೂಲ್ ಶಾಲೆಗೆ ಹಿರಿಯ ಪಾಲಕರನ್ನು ಆಹ್ವಾನಿಸಿ ನಾನಾ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಬಾಂಧವ್ಯ ಬೆಸೆಯುವ ಅತ್ಯುತ್ತಮ ಪ್ರಯತ್ನವಾಗಿದೆ” ಎಂದು ಶ್ಲಾಘಿಸಿದರು.
ಇದೇ ವೇಳೆ ಅಜ್ಜ- ಅಜ್ಜಿಯರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಡೆದ ಹಿರಿಯರಿಗಾಗಿಯೇ ನಾನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇಳಿ ವಯಸ್ಸಿನಲ್ಲಿಯೂ ಹಿರಿಯರು ಮಕ್ಕಳಂತೆ ನಾನಾ ಆಟಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು.
ಕ್ರೀಡೆಯಲ್ಲಿ ವಿಜೇತರಾದ ಹಿರಿಯರುಗಳಾದ ಶಂಕರ ಚವ್ಹಾಣ, ಡಾ. ರೇವಪ್ಪ ವಾಗ್ಮೋರೆ, ಭಾರತಿ ಮುಧೋಳ, ಸುಮಂಗಲಾ ಅವರಿಗೆ ಶಾಲೆಯ ಪ್ರಾಚಾರ್ಯ ಡಾ. ಶೈಜು ಕೆ ನಾಯರ ಬಹುಮಾನ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಇರಾನ್‌ನ ಅಯತೊಲ್ಲಾ ಅಲಿ ಖಮೇನಿ ಹತ್ಯೆ; ಚಿಕ್ಕಬಳ್ಳಾಪುರದ ಗ್ರಾಮದಲ್ಲಿ 3 ದಿನಗಳ ಶೋಕಾಚರಣೆ
ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಮಹೇಶ ಪಾಟೀಲ, ಸವಿತಾ ಮಂಗಳವೇಡೆ ಅವರು ಯುಕೆಜಿಯಿಂದ ಒಂದನೇ ತರಗತಿಗೆ ಕಾಲಿಡುತ್ತಿರುವ ಮಕ್ಕಳಿಗೆ ಪದವಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.





