ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ವಿಜಯಪುರಕ್ಕೆ ಆಗಮಿಸಿ, ಈ ನೆಲವನ್ನು ಪವಿತ್ರಗೊಳಿಸಿದ್ದಾರೆ. ಪ್ರತಿಯೊಬ್ಬರೂ ಇಂತಹ ಪವಿತ್ರ ನೆಲದಲ್ಲಿ ಆಯೋಜಿಸಿರುವ ʼಭೀಮ ಗಾಯನʼ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕು ಎಂದು ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸೋಮವಾರ ಸಂಜೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ʼಭೀಮ ಗಾಯನʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಾವಿದರು ಪ್ರಸ್ತುತ ಪಡಿಸುವ ಭೀಮ ಗೀತೆಗಳ ಗುಚ್ಛ ಕಾರ್ಯಕ್ರಮದ ಮೂಲಕ ಡಾ. ಅಂಬೇಡ್ಕರ್ ಜೀವನ ಹಾಗೂ ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮ ಪ್ರಸ್ತುತಿಯೊಂದಿಗೆ ಹರಿದು ಬರಲಿರುವ ಗಾನ ಸುಧೆಯೊಂದಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಸ್ಮರಿಸೋಣ. ಅವರ ಆದರ್ಶದ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಜತೆಗೆ ಆ ಸಂಗೀತದ ಮೂಲಕ ಹೊರಹೊಮ್ಮುವ ಸ್ವರಗಳನ್ನು ಆಲಿಸುವುದರೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದು ಡಾ.ಔದ್ರಾಮ್ ಸಲಹೆ ನಿಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಕುರಿತ ಸುಮಧುರ ಗೀತ ಗಾಯನ ಮಾಡುವ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಸಂತೋಷ ಭೋವಿ ಸಂವಿಧಾನ ಪೀಠಿಕೆ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆಮರೇಶ ದೊಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ನಿರೂಪಿಸಿದರು.
ಇದನ್ನೂ ಓದಿ: ವಿಜಯಪುರ | ಕನಿಷ್ಟ ಕೂಲಿ ಜಾರಿಗೆ CITU ಒತ್ತಾಯ
ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಇಲಾಖೆ ಉಪನಿರ್ದೆಶಕ ಡಾ. ಅಶೋಕ ಪೊಣಸಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲಿಕ ಮಾನವರ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ. ಎಸ್. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಭೋವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ರಾಜು ಕೂಚಬಾಳ, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪೀರಪ್ಪ ನಡುವಿನಮನಿ, ಸುರೇಶ ಪೊಣಸಗಿ, ಭೀಮರಾಯ ಜಿಗಜಿಣಗಿ, ಆಡಿವೆಪ್ಪ ಸಾಲಗಲ್, ವಿದ್ಯಾವತಿ ಅಂಕಲಗಿ, ಚನ್ನು ಕಟ್ಟಿಮನಿ, ಶ್ರೀನಾಥ ಪೂಜಾರಿ, ರಾಜಶೇಖರ ಹೇರಹಳ್ಳಿ ಮತ್ತಿತರರಿದ್ದರು.





