ರಾಜ್ಯದಲ್ಲಿ ‘ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವುದನ್ನು ನಾವು ಖಂಡಿಸುತ್ತೇವೆ. ಎಲ್ಲೆಲ್ಲಿ ಶಾಲೆಗಳನ್ನು ಮುಚ್ಚುತ್ತಾರೆಯೋ ಅಲ್ಲಲ್ಲಿ ಜನ ಹೋರಾಟ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹ.ಮ. ಪೂಜಾರ ಹೇಳಿದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ 1000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಒ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ʼನಮ್ಮೂರ ಸರ್ಕಾರಿ ಶಾಲೆ ಉಳಿಸಲು ಜಿಲ್ಲಾ ಮಟ್ಟದ ಪ್ರತಿಭಟನೆ ಸಮಾವೇಶʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ನೆಗಡಿ ಬಂದಾಗ ಅದಕ್ಕೆ ಔಷಧಿ ನೀಡಬೇಕು. ಅದನ್ನು ಬಿಟ್ಟು ಮೂಗನ್ನೇ ಕತ್ತರಿಸುವುದಲ್ಲ. ಅದೇ ರೀತಿ ಇಂದು ಸರ್ಕಾರ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಬದಲು ಸಂಪೂರ್ಣವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿಹಾಕಲು ಹೊರಟಿದೆ. ಇದು ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಮಾಡುವ ಅತ್ಯಂತ ದೊಡ್ಡ ದ್ರೋಹವಾಗಿದೆ ಎಂದು ಆರೋಪಿಸಿದರು.
ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, ಕನ್ನಡ ಶಾಲೆಗಳು ಪ್ರತಿಯೊಂದು ಗ್ರಾಮದಲ್ಲಿ ಇರಬೇಕು. ಈಗಾಗಲೇ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. 7,000ಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿ ಸರ್ಕಾರ ಹಿಂಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬಬುಲೇಶ್ವರ್ ಬೀಳೂರ್ ಮಾತನಾಡಿ, ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಫುಲೆ ಯವರು ಹೆಣ್ಣು ಮಕ್ಕಳ, ಶೋಷಿತರ ಶಿಕ್ಷಣಕ್ಕಾಗಿ ದುಡಿದವರು ತಮ್ಮ ಜೀವನವನ್ನೇ ಅದಕ್ಕಾಗಿ ಅರ್ಪಿಸಿದರು. ಆದರೆ ಅವರ ಆಶಯಗಳನ್ನು ಸಾಕಾರಗೊಳಿಸುವ ಬದಲಾಗಿ, ಇಂದು ಸರ್ಕಾರಗಳು ಶಿಕ್ಷಣವನ್ನು ಬಡವರಿಂದ ಕಸಿಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಂದಿರುವ ನೀತಿಯೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆ. ಇತ್ತೀಚಿಗೆ ರಾಜ್ಯ ಬಜೆಟ್ ನಲ್ಲಿ, “ಉನ್ನತ ಶಿಕ್ಷಣದ ಪರಿವರ್ತನೆ” ಮತ್ತು “ಗುಣಮಟ್ಟದ ಕಲಿಕೆ” ಎಂಬ ಆಕರ್ಷಕ ಪದಗಳ ಹೆಸರಿನಲ್ಲಿ ಶಿಕ್ಷಣವನ್ನು ಕೇಂದ್ರೀಕೃತಗೊಳಿಸುವ ಒಂದು ವ್ಯವಸ್ಥಿತ ಸಂಚಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ನೀರಾವರಿಗಾಗಿ ಭೂಮಿ ಕಳೆದುಕೊಂಡ ರೈತರ ಕಣ್ಣೀರು ಒರೆಸಲು ಸರ್ಕಾರ ಮುಂದಾಗಿದೆ: ಸಚಿವ ಎಂ ಬಿ ಪಾಟೀಲ
ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಮಾತನಾಡಿ, ನಮ್ಮ ಊರಿನಲ್ಲಿ ನಾವು ಓದಬೇಕಾದರೆ ಶಾಲೆ ಇರಲಿಲ್ಲ, ಹೋರಾಟ ಮಾಡಿದ್ದರಿಂದ ಶಾಲೆ ಪ್ರಾರಂಭವಾಯಿತು. ಆದರೆ ಈ ಶಾಲೆಯನ್ನೇ ಮುಚ್ಚುತ್ತಿರುವುದು ಖಂಡನೀಯ. ಶಾಲೆಗಳನ್ನು ಮುಚ್ಚಿ ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆಗಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಿರುವುದು ಸರ್ಕಾರದ ಬೂಟಾಟಿಕೆ ಎಂದರು.
ಸಮಾವೇಶದಲ್ಲಿ AIUTUC ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರರಾದ ಮಲ್ಲಿಕಾರ್ಜುನ ಹೆಚ್.ಟಿ, AIMSS ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಶಿವಬಾಳಮ್ಮ ಕೊಂಡಗೂಳಿ, AIDYO ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದರಾಮಯ್ಯ ಹಿರೇಮಠ, ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಪದಾಧಿಕಾರಿಗಳಾದ ಹಯ್ಯಾಳಪ್ಪ,ಪೂಜಾ, ಶಶಿಕಲಾ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಯುವಜನ ಸಂಘಟನೆಯ ಮುಖಂಡರಾದ ಸಿದ್ಧಲಿಂಗ ಭಾಗವೇಡಿ, ವಿವಿಧ ಹಳ್ಳಿಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





