ವಿಜಯಪುರ ಜಿಲ್ಲೆಯ 137 SSLC ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ನಗರದ ಶಾಂತಿನಿಕೇತನ ಹಾಗೂ ಲಯೋಲಾ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳದೇ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಿದರು.
ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಘಟ್ಟವಾಗಿರುವುದರಿಂದ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ದೂರಿಗೆ ಆಸ್ಪದೆ ನೀಡದೆ ಪರೀಕ್ಷಾ ನಿಯಮಗಳನ್ನುನಸರಿಸಿ, ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ತಮಗೆ ವಹಿಸಿದ ಪರೀಕ್ಷಾ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೆಬ್ ಕಾಸ್ಟಿಂಗ್ ಕೇಂದ್ರದಲ್ಲಿ ಅಳವಡಿಸಿರುವ ಗಣಕಯಂತ್ರಗಳು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗಳು ಮತ್ತು ಇಂಟರ್ನೆಟ್ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಯಾವುದೇ ಸಿಸಿಟಿವಿ ಸ್ಥಗಿತಗೊಳ್ಳದಂತೆ ನಿಗಾ ವಹಿಸಬೇಕು ಎಂದರು.
ಇದನ್ನೂ ಓದಿ: ವಿಜಯಪುರ | ವೈದ್ಯಕೀಯ ನಿರ್ಲಕ್ಷ್ಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಮಾಹಿತಿ, ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ, ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಮತ್ತು ವೆಬ್ ಕಾಸ್ಟಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಈ ಸಂದರ್ಭ ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.





