ವಿಜಯಪುರ ಜಿಲ್ಲೆಯ ಹಲವು ಬಸ್ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಖಂಡಿಸಿದ್ದಾರೆ. ಕೂಡಲೇ ಶುಲ್ಕ ವಸೂಲಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ ಮಾತನಾಡಿ, “ವಿಜಯಪುರ ಜಿಲ್ಲಾ ಮತ್ತು ತಾಲೂಕು ಬಸ್ ನಿಲ್ದಾಣಗಳಲ್ಲಿನ ಸಾರ್ವಜನಿಕರ ಶೌಚಾಲಯ ಮತ್ತು ಮೂತ್ರಾಲಯಗಳನ್ನು ಉಪಯೋಗಿಸುವ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಸಂಸ್ಥೆ ನಿಯಮಗಳ ಪ್ರಕಾರ ಶೌಚಕ್ಕೆ ₹2 ದರವಿದ್ದು, ಮೂತ್ರವಿಸರ್ಜನೆ ಉಚಿತವಾಗಿದೆ. ಆದರೆ ಗುತ್ತಿಗೆ ಪಡೆದವರು ಮನಬಂದಂತೆ ಹಣ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದರು.
“ಮೇಲಧಿಕಾರಿಗಳು ವಿಷಯವನ್ನು ಈ ಗಂಭೀರವಾಗಿ ಪರಿಗಣಿಸಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಡೆಗಟ್ಟಬೇಕು. ಸರ್ಕಾರದ ನಿಯಮಾವಳಿಗಳ ದರವನ್ನು ಕಡ್ಡಾಯವಾಗಿ ದೊಡ್ಡ ಅಕ್ಷರಗಳಲ್ಲಿ ಅಳವಡಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವ
ಸಂಜೀವಕುಮಾರ ಕೆ, ಯಲ್ಲಾಲಿಂಗ ಉಮರಾಣಿ, ಶಶಿಕಾಂತ ಹಚಡದ, ಪರಶುರಾಮ ಸಾತಿಹಾಳ ಇದ್ದರು.





