ವಿಜಯಪುರ ಜಿಲ್ಲೆಯಲ್ಲಿ ಶೇ.38ಕ್ಕೂ ಹೆಚ್ಚು ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳೂ ಇಲ್ಲದೆ ಬದುಕುತ್ತಿದ್ದಾರೆ. ಇವರ ಬದುಕು ನಿತ್ಯ ನರಕವಾಗಿದೆ. ಸ್ಲಂ ನಿವಾಸಿಗಳ ಸಮಗ್ರ ಹಿತ ರಕ್ಷಣೆ ಹಾಗೂ ಅವರಿಗೆ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಮುಟ್ಟಿಸುವ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ದಲಿತ ಸ್ವರಾಜ್ಯ ಸೇನೆ ಜಿಲ್ಲಾಧ್ಯಕ್ಷ ಗೌಡಪ್ಪ ಬಡಿಗೇರ ಮನವಿ ಮಾಡಿದರು.
ನಗರದ ಸ್ಲಂ ನಿವಾಸಿಗಳ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಅವರಿಗೆ ಹಕ್ಕು ಪತ್ರ ಸೇರಿದಂತೆ ವಿವಿಧ ಪೂರಕ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕೆಂದು ಆಗ್ರಹಿಸಿ ದಲಿತ ಸ್ವರಾಜ್ಯ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಗೌರವಯುತ ಜೀವನ ಮತ್ತು ಆರೋಗ್ಯಕರ ವಾತಾವರಣ ಪ್ರತಿಯೊಬ್ಬನ ಹಕ್ಕು. ಸಂವಿಧಾನ ಒದಗಿಸಿದ ಬದುಕುವ ಹಕ್ಕುಗಳನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು. ಕೊಳಚೆ ನಿವಾಸಿಗಳ ಕುಂದು ಕೊರತೆ ಆಲಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಭೆ ಕರೆಯೋದು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದರು.
ಇದನ್ನೂ ಓದಿ: ವಿಜಯಪುರ | ಫೆ.23ರಿಂದ ಉಚಿತ ಹೈಪೋಥೈರಾಯ್ಡಿಸಮ್ ತಪಾಸಣೆ!
ಸಂಘಟನೆಯ ಪದಾಧಿಕಾರಿಗಳಾದ ಅಮೃತ್, ಪರಶುರಾಮ್, ಆದಿತ್ಯ, ಶರಣು, ಸಾಗರ್, ತಫೀಕ್, ಕಿರಣ್, ಇಮ್ರಾನ್, ಚನ್ನು, ಸುಭಾಷ್ ಹಾಗೂ ಪರಮೇಶ್ ಇದ್ದರು.





